2025ರೊಳಗೆ ಮಿಗ್-21 ಜೆಟ್ ವಿಮಾನ ಹಾರಾಟ ಸ್ಥಗಿತ: ವಾಯುಪಡೆ ಮುಖ್ಯಸ್ಥ
ಹೊಸದಿಲ್ಲಿ: ರಷ್ಯಾ ನಿರ್ಮಿತ ಮಿಗ್-21 ಜೆಟ್ ವಿಮಾನದ ಸೇವಾವಧಿ ಮುಗಿಯುತ್ತಿರುವುದರಿಂದ ಅದನ್ನು ಬದಲಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದ್ದು, 2025ರ ವೇಳೆಗೆ ಮಿಗ್-21 ಜೆಟ್ ವಿಮಾನದ ಬದಲಿಗೆ ಎಲ್‍ಸಿಎ ಮಾರ್ಕ್ ಎ1 ವಿಮಾನಗಳು ವಾಯಪಡೆಯಲ್ಲಿ ಸ್ಥಾನ ಪಡೆಯಲಿವೆ ಎಂದು ಮಂಗಳವಾರ ವಾಯುಪಡೆಯ ಮುಖ್ಯಸ್ಥ ವಿ.ಆರ್.ಚೌಧರಿ ತಿಳಿಸಿದ್ದಾರೆ ಎಂದು ndtv.com ವರದಿ ಮಾಡಿದೆ.
ಅಕ್ಟೋಬರ್ 8ರಂದು ಪ್ರಯಾಗ್ ರಾಜ್ ನಲ್ಲಿ ನಡೆಯಲಿರುವ ವಾಯುಪಡೆ ದಿನಾಚರಣೆಗೂ ಮುನ್ನ ಅವರು ದಿಲ್ಲಿಯಲ್ಲಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಮಿಗ್-21 ಜೆಟ್ ವಿಮಾನದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ವಾಯುಪಡೆ ಮುಖ್ಯಸ್ಥ ಚೌಧರಿ, “ನಾವು 83 ಎಲ್‍ಸಿಎ ಮಾರ್ಕ್-1ಎ ಖರೀದಿಗಾಗಿ ಗುತ್ತಿಗೆ ಪತ್ರಕ್ಕೆ ಸಹಿ ಹಾಕಿದ್ದೇವೆ. ಈ ಗುತ್ತಿಗೆಯನ್ವಯ 97 ಹೆಚ್ಚುವರಿ ವಿಮಾನಗಳನ್ನು ಪೂರೈಸಬೇಕಿದೆ. ಇದರಿಂದ ಎಲ್‍ಸಿಎ ಮಾರ್ಕ್ 1ಎ ವಿಮಾನಗಳ ಒಟ್ಟು ಸಂಖ್ಯೆ 180ಕ್ಕೆ ತಲುಪಲಿದೆ” ಎಂದು ತಿಳಿಸಿದ್ದಾರೆ.
“ನಾವು 2025ರ ಹೊತ್ತಿಗೆ ಮಿಗ್-21 ಜೆಟ್ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಿದ್ದೇವೆ ಹಾಗೂ ಮಿಗ್-21 ಜೆಟ್ ವಿಮಾನಗಳ ಬದಲಿಗೆ ಎಲ್‍ಸಿಎ ಮಾರ್ಕ್-1ಎ ನಿಯೋಜಿಸಲಿದ್ದೇವೆ. ಇದೇ ಪ್ರಸ್ತಾವನೆಯು ಅಸ್ತಿತ್ವದಲ್ಲಿದೆ. ಮುಂದಿನ ತಿಂಗಳು ಅಥವಾ ಅದರೊಳಗೆ ಎರಡನೆ ಸರಣಿಯ ಎಲ್‍ಸಿಎ ಮಾರ್ಕ್-1ಎ ಜೆಟ್ ವಿಮಾನಗಳಿಗೆ ಸಂಖ್ಯಾಫಲಕಗಳನ್ನು ಅಳವಡಿಸಲಾಗುತ್ತದೆ. ನಂತರ ಮೂರನೆಯ ಸರಣಿಯ ಎಲ್‍ಸಿಎ ಮಾರ್ಕ್-1ಎ ಜೆಟ್ ವಿಮಾನಗಳು ಬಹುಶಃ ಮುಂದಿನ ವರ್ಷ ವಾಯುಪಡೆಯನ್ನು ಸೇರ್ಪಡೆಯಾಗಲಿವೆ. ಸೇವೆಯಿಂದ ಹಿಂದೆ ಸರಿಯುತ್ತಿರುವ ಮಿಗ್-21 ಜೆಟ್ ವಿಮಾನಗಳ ನಿರ್ವಾತವನ್ನು ಎಲ್ಸಿಎ ಮಾರ್ಕ್-1ಎ ಜೆಟ್ ವಿಮಾನಗಳು ತುಂಬಲಿವೆ” ಎಂದು ಅವರು ಹೇಳಿದ್ದಾರೆ.
ಐತಿಹಾಸಿಕ ಮಿಗ್-21 ಜೆಟ್ ವಿಮಾನಗಳು ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯುವ ವಿಮಾನ ಹಾರಾಟದಲ್ಲಿ ಬಹುಶಃ ತಮ್ಮ ಕೊನೆಯ ಹಾರಾಟವನ್ನು ನಡೆಸಲಿವೆ ಎಂದು ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಪ್ರಕಟಿಸಲಾಗಿದೆ.
60 ವರ್ಷಗಳಿಂದ ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಿಗ್-21 ಜೆಟ್ ವಿಮಾನಗಳು ಇತ್ತೀಚಿನ ದಿನಗಳಲ್ಲಿ ಹಲವು ಅಪಘಾತಗಳಿಗೆ ಈಡಾಗಿವೆ.