ದಾರಿತಪ್ಪಿಸುವ ಜಾಹೀರಾತು ಪ್ರಕರಣ: ಸರಿಯಾದ ಅಫಿಡವಿಟ್‌ ಸಲ್ಲಿಸದೇ ಇರುವುದಕ್ಕೆ ರಾಮದೇವ್‌, ಆಚಾರ್ಯ ಬಾಲಕೃಷ್ಣಗೆ ಮತ್ತೆ ಸುಪ್ರೀಂ ತರಾಟೆ

Update: 2024-04-02 07:54 GMT

ಆಚಾರ್ಯ ಬಾಲಕೃಷ್ಣ , ಗುರು ರಾಮದೇವ್‌ | Photo: PTI 

ಹೊಸದಿಲ್ಲಿ: ದಾರಿತಪ್ಪಿಸುವ ಜಾಹೀರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ಸರಿಯಾದ ಅಫಿಡವಿಟ್‌ಗಳನ್ನು ಸಲ್ಲಿಸದೇ ಇರುವುದಕ್ಕಾಗಿ ಇಂದು ಸುಪ್ರೀಂ ಕೋರ್ಟ್‌ ಇಂದು ಪತಂಜಲಿ ಆಯುರ್ವೇದ ಸಂಸ್ಥೆಯ ಸಹಸ್ಥಾಪಕರಾಗಿರುವ ಯೋಗ ಗುರು ರಾಮದೇವ್‌ ಹಾಗೂ ಆಡಳಿತ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರನ್ನು ತರಾಟೆಗೆ ತೆಗೆದುಕೊಂಡಿದೆ.

“ಸುಪ್ರೀಂ ಕೋರ್ಟ್‌ ಮಾತ್ರವಲ್ಲ, ಈ ದೇಶದಾದ್ಯಂತ ಇರುವ ಪ್ರತಿಯೊಂದು ಕೋರ್ಟಿನ ಆದೇಶ ಪಾಲಿಸಬೇಕು. ನೀವು ಪಾಲಿಸಿಲ್ಲ,” ಎಂದು ಸುಪ್ರೀಂ ಕೋರ್ಟ್‌ ಹೇಳಿತಲ್ಲದೆ ಕ್ರಮ ಎದುರಿಸಲು ಸಿದ್ಧರಾಗಿ ಎಂದು ಬಾಬಾ ರಾಮದೇವ್‌ ಅವರಿಗೆ ಹೇಳಿತು.

ಕಳೆದ ತಿಂಗಳು ಪತಂಜಲಿಯು ಸುಪ್ರೀಂ ಕೋರ್ಟ್‌ ತರಾಟೆಯ ನಂತರ ಸಲ್ಲಿಸಿದ್ದ ಕ್ಷಮೆಯನ್ನು ಸ್ವೀಕರಿಸಲು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್‌ ಅಮಾನುಲ್ಲಾ ಅವರ ಪೀಠ ನಿರಾಕರಿಸಿದೆ.

“ನಿಮ್ಮ ಕ್ಷಮೆಯಾಚನೆಯಿಂದ ನಮಗೆ ಖುಷಿಯಾಗಿಲ್ಲ, ಅದು ಕೇವಲ ಬಾಯ್ಮಾತು,” ಎಂದು ನ್ಯಾಯಮೂರ್ತಿ ಹೇಳಿದರು. ಆಗ ಪ್ರತಿಕ್ರಿಯಿಸಿದ ರಾಮದೇವ್‌ ಹಾಗೂ ಬಾಲಕೃಷ್ಣ ಅವರ ವಕೀಲರು ಅವರು ಖುದ್ದಾಗಿ ಕ್ಷಮೆಯಾಚಿಸಲು ಸಿದ್ಧ ಹಾಗೂ ಕೋರ್ಟ್‌ ಹೇಳಿದಂತೆ ನಡೆದುಕೊಳ್ಳಲು ಸಿದ್ಧ ಎಂದರು.

ಒಂದು ವಾರದೊಳಗೆ ಅಫಿಡವಿಟ್‌ ಸಲ್ಲಿಸಲು ನ್ಯಾಯಾಲಯ ರಾಮದೇವ್‌ ಹಾಗೂ ಬಾಲಕೃಷ್ಣ ಅವರಿಗೆ ಕೊನೆಯ ಅವಕಾಶ ನೀಡಿತು. ಮುಂದಿನ ವಿಚಾರಣಾ ದಿನಾಂಕವಾದ ಎಪ್ರಿಲ್‌ 10ರಂದು ನ್ಯಾಯಾಲಯದಲ್ಲಿ ಖುದ್ದಾಗಿ ಹಾಜರಾಗುವಂತೆ ಸುಪ್ರೀಂ ಕೋರ್ಟ್‌ ಇಬ್ಬರಿಗೂ ಸೂಚಿಸಿದೆ.

ಕಳೆದ ವಿಚಾರಣೆ ವೇಳೆ ಸಂಸ್ಥೆಯ ವಕೀಲರು ಸಂಸ್ಥೆಯ ಆಡಳಿತದ ಪರವಾಗಿ ಬೇಷರತ್‌ ಕ್ಷಮೆಯಾಚಿಸಿದ್ದರಲ್ಲದೆ ಸಂಸ್ಥೆಯ ಉತ್ಪನ್ನಗಳನ್ನು ಬಳಸಿ ಆರೋಗ್ಯಕರ ಜೀವನವನ್ನು ಜನರು ನಡೆಸಬೇಕೆಂಬುದೇ ತನ್ನ ಉದ್ದೇಶ ಎಂದು ಹೇಳಿತ್ತು.

ದಾರಿತಪ್ಪಿಸುತ್ತಿವೆ ಎಂದು ಆರೋಪಿಸಲಾದ ಜಾಹೀರಾತುಗಳ ಪ್ರಸಾರವನ್ನು ನಿಲ್ಲಿಸುವಂತೆ ಪತಂಜಲಿ ಸಂಸ್ಥೆಗೆ ಫೆಬ್ರವರಿ 27ರಂದು ನ್ಯಾಯಾಲಯ ಆದೇಶಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News