ಮೋದಿ ಸರಕಾರವು ಜನರನ್ನು ದೋಚುತ್ತಿದೆ: ಇಂಧನ ಬೆಲೆಗಳ ಕುರಿತು ಖರ್ಗೆ ವಾಗ್ದಾಳಿ

ಮಲ್ಲಿಕಾರ್ಜುನ ಖರ್ಗೆ | PC : PTI
ಹೊಸದಿಲ್ಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಕಚ್ಚಾ ತೈಲ ಬೆಲೆಗಳಲ್ಲಿ ಇಳಿಕೆಯ ಲಾಭವನ್ನು ಜನರಿಗೆ ವರ್ಗಾಯಿಸದ್ದಕ್ಕಾಗಿ ಸೋಮವಾರ ಸರಕಾರವನ್ನು ತರಾಟೆಗೆತ್ತಿಕೊಂಡಿದ್ದಾರೆ.
ಕಚ್ಚಾ ತೈಲ ಬೆಲೆಗಳು 42 ತಿಂಗಳ ಕನಿಷ್ಠ ಮಟ್ಟದಲ್ಲಿವೆ ಎಂಬ ಮಾಧ್ಯಮ ವರದಿಯನ್ನು ಎಕ್ಸ್ ಪೋಸ್ಟ್ ನಲ್ಲಿ ಹಂಚಿಕೊಂಡಿರುವ ಖರ್ಗೆ, ಇನ್ನೂ ಎಷ್ಟು ಸಮಯ ಬಿಜೆಪಿ ಸಾರ್ವಜನಿಕರನ್ನು ಸುಲಿಗೆ ಮಾಡಲಿದೆ ಎಂದು ಪ್ರಶ್ನಿಸಿದ್ದಾರೆ. ಮೋದಿ ಸರಕಾರವು ಜನರನ್ನು ದೋಚುತ್ತಿದೆ ಎಂದು ಆರೋಪಿಸಿದ್ದಾರೆ.
ಕಚ್ಚಾ ತೈಲಗಳ ಬೆಲೆಗಳು ನಿರಂತರವಾಗಿ ಕುಸಿಯುತ್ತಿವೆ, ಆದರೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಇಳಿಸಲಾಗಿಲ್ಲ. ಮೋದಿ ಸರಕಾರವು ಜನರನ್ನು ನಿರ್ಭಯವಾಗಿ ಕೊಳ್ಳೆ ಹೊಡೆಯುತ್ತಿದೆ ಎಂದು ಹೇಳಿರುವ ಅವರು, ಮೋದಿಯವರು ತಮ್ಮ ದೀರ್ಘ ಏಕಪಕ್ಷೀಯ ಪಾಡಕಾಸ್ಟ್‌ಗಳ ಮೂಲಕ ತನ್ನ ‘ಮನ್ ಕಿ ಬಾತ್’ನ್ನು ಸಾರ್ವಜನಿಕರಿಗೆ ಹೇಳುತ್ತಾರೆ ಮತ್ತು ಹಣದುಬ್ಬರದಿಂದಾಗಿ ಜನರು ಕಣ್ಣೀರು ಸುರಿಸುವಂತೆ ಮಾಡುತ್ತಿದ್ದಾರೆ ಎಂದಿದ್ದಾರೆ.
ಮೇ 2014ರಿಂದೀಚಿಗೆ ಕಚ್ಚಾ ತೈಲ ಬೆಲಗಳು ಶೇ.34ರಷ್ಟು ಕುಸಿದಿವೆ. ಕಳೆದ ಹತ್ತು ವರ್ಷಗಳಲ್ಲಿ ಮೋದಿ ಸರಕಾರವು ತೆರಿಗೆ ರೂಪದಲ್ಲಿ 36 ಲ.ಕೋ.ರೂ.ಗಳನ್ನು ದೋಚಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಯಾವಾಗ ಕಡಿಮೆಯಾಗಲಿವೆ ಎಂದು ಖರ್ಗೆ ಪ್ರಶ್ನಿಸಿದ್ದಾರೆ.