ಮೋದಿ, ಶಾ, ಅಂಬಾನಿ ‘‘ಒಗ್ಗಟ್ಟಾಗಿದ್ದರೆ, ಸುರಕ್ಷಿತ’’: ಬಿಜೆಪಿ ಘೋಷಣೆಗೆ ರಾಹುಲ್ ಗಾಂಧಿ ವ್ಯಂಗ್ಯ
ರಾಂಚಿ : ಬಿಜೆಪಿಯ ‘‘ಒಗ್ಗಟ್ಟಾಗಿದ್ದರೆ, ಸುರಕ್ಷಿತರಾಗಿರುತ್ತೇವೆ’’ ಎಂಬ ಘೋಷಣೆ ಕುರಿತು ಸೋಮವಾರ ವ್ಯಂಗ್ಯವಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇದನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಅಂಬಾನಿಯಂತಹ ಕೋಟ್ಯಧಿಪತಿಗಳ ನಡುವಿನ ‘‘ಒಗ್ಗಟ್ಟು’’ ಎಂದು ಭಾಷಾಂತರಿಸಬಹುದು ಎಂದಿದ್ದಾರೆ.
ಕಳೆದ ಒಂದೂವರೆ ವರ್ಷಗಳಿಂದ ಜನಾಂಗೀಯ ಹಿಂಸಾಚಾರದಿಂದ ಪ್ರಕ್ಷುಬ್ದಗೊಂಡಿರುವ ಮಣಿಪುರಕ್ಕೆ ಭೇಟಿ ನೀಡದಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡರು. ಮಣಿಪುರದ ಹಿಂಸಾಚಾರದಲ್ಲಿ ಸ್ಥಾಪಿತ ಹಿತಾಸಕ್ತಿಗಳ ಕೈವಾಡ ಇದೆ. ಆದುದರಿಂದ ಅದನ್ನು ತಡೆಗಟ್ಟಲು ಅಮಿತ್ ಶಾ ಅವರು ಆಸಕ್ತಿ ತೋರಿಸುತ್ತಿಲ್ಲ ಎಂದು ಅವರು ಹೇಳಿದರು.
‘‘ಒಗ್ಗಟ್ಟಾಗಿದ್ದರೆ, ಸುರಕ್ಷಿತರಾಗಿರುತ್ತೇವೆ ಎಂಬ ಬಿಜೆಪಿಯ ನಿಜವಾದ ಅರ್ಥವನ್ನು ನಾನು ವಿವರಿಸುತ್ತೇನೆ. ಮೋದಿ, ಶಾ ಹಾಗೂ ಅಂಬಾನಿ ಒಗ್ಗಟ್ಟಾಗಿದ್ದಾರೆ ಸುರಕ್ಷಿತ’’ ಎಂದು ರಾಹುಲ್ ಗಾಂಧಿ ಚುನಾವಣಾ ಪ್ರಚಾರದ ಕೊನೆಯ ದಿನವಾದ ಸೋಮವಾರ ರಾಂಚಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವಿಮಾನ ನಿಲ್ದಾಣ, ಬಂದರು ಹಾಗೂ ಪ್ರಾಕೃತಿಕ ಸಂಪನ್ಮೂಲದಂತಹ ದೇಶ ಪ್ರಮುಖ ಸೊತ್ತುಗಳನ್ನು ಪಾರದರ್ಶಕ ಹರಾಜು ಪ್ರಕ್ರಿಯೆಯನ್ನು ಅನುಸರಿಸದೆ ಅದಾನಿ ಹಾಗೂ ಅಂಬಾನಿಯಂತಹ ಶತಕೋಟ್ಯಧಿಪತಿಗಳಿಗೆ ಹಸ್ತಾಂತರ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಜಾತಿ ಗಣತಿ ದೇಶಕ್ಕೆ ಅತಿ ಮುಖ್ಯವಾದುದು. ಇದು ಸಂಪತ್ತು ಹಂಚಿಕೆಯ ದತ್ತಾಂಶವನ್ನು ನೀಡುತ್ತದೆ. ಇದು ನಿಖರ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಾಂಗ್ರೆಸ್ಗೆ ನೆರವಾಗುತ್ತದೆ ಎಂದು ಅವರು ಹೇಳಿದರು.
ಜಾತಿ ಗಣತಿಯ ಚಿಂತನೆಯನ್ನು ಮುಂದಿಟ್ಟ ಯುಪಿಎ ಸರಕಾರ ಅದನ್ನು ಅನುಷ್ಠಾನಗೊಳಿಸದೇ ಇರುವುದು ತಪ್ಪು ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದರು.
ಭಾರತದ ಜನಸಂಖ್ಯೆಯಲ್ಲಿ ಶೇ. 73 ಇರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳು ದೇಶದ ಅಧಿಕಾರ ವ್ಯವಸ್ಥೆಯಲ್ಲಿ ಯಾವ ಸ್ಥಾನ ಪಡೆದುಕೊಂಡಿದ್ದಾರೆ ಎಂಬುದನ್ನು ಜಾತಿ ಗಣತಿ ಬಹಿರಂಗಪಡಿಸಲಿದೆ. ಇದು ದೇಶದ ಅಭಿವೃದ್ಧಿ ಹಾಗೂ ಪರಿವರ್ತನೆಗೆ ಕಾರಣವಾಗಲಿದೆ ಎಂದು ರಾಹುಲ್ ಗಾಂಧಿ ಹೇಳಿದರು.