ಮೋದಿಯ ಜನಧನ ಯೋಜನೆ ಮೂಲತಃ ಯುಪಿಎ ಸರಕಾರದ್ದು:ಚಿದಂಬರಂ
ಹೊಸದಿಲ್ಲಿ: ಜನಧನ ಯೋಜನೆಯು ಮೂಲತಃ ಯುಪಿಎ ಸರಕಾರದ ಯೋಜನೆಯಾಗಿದ್ದು,ಅದಕ್ಕೆ ಮೋದಿ ಸರಕಾರವು ಮರುನಾಮಕರಣ ಮಾಡಿದೆ ಎಂದು ಗುರುವಾರ ಹೇಳಿರುವ ಹಿರಿಯ ಕಾಂಗ್ರೆಸ್ ನಾಯಕ ಮಾಜಿ ಕೇಂದ್ರ ವಿತ್ತಸಚಿವ ಪಿ.ಚಿದಂಬರಂ ಅವರು,ಈ ಯೋಜನೆಯಡಿ 2005 ಮತ್ತು 2014ರ ನಡುವೆ ಲಕ್ಷಾಂತರ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿತ್ತು ಎಂದು ಪ್ರತಿಪಾದಿಸಿದ್ದಾರೆ.
ಪ್ರಧಾನ ಮಂತ್ರಿ ಜನಧನ ಯೋಜನೆಯು ಬುಧವಾರ 10 ವರ್ಷಗಳನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಚಿದಂಬರಂ ಅವರ ಹೇಳಿಕೆ ಹೊರಬಿದ್ದಿದೆ.
ಯೋಜನೆಯ ಪರಿಕಲ್ಪನೆ ಆಗಿನ ಆರ್‌ಬಿಐ ಗವರ್ನರ್ ಸಿ.ರಂಗರಾಜನ್ ಅವರದಾಗಿತ್ತು. 2005ರಲ್ಲಿ ‘ನೋ ಫ್ರಿಲ್ಸ್ ಅಕೌಂಟ್’ ಅಥವಾ ‘ಝೀರೊ ಬ್ಯಾಲನ್ಸ್ ಅಕೌಂಟ್’ನ್ನು ಪರಿಚಯಿಸಿದಾಗ ಡಾ.ವೈ.ವಿ.ರೆಡ್ಡಿಯವರು ಆರ್‌ಬಿಐ ಗವರ್ನರ್ ಆಗಿದ್ದರು. ಡಾ.ರೆಡ್ಡಿಯವರ ಬಳಿಕ ಡಾ.ಸುಬ್ಬರಾವ್ ಆರ್‌ಬಿಐ ಗವರ್ನರ್ ಆಗಿದ್ದರು. ಯೋಜನೆಯನ್ನು ಪರಿಚಯಿಸಿದ ಹೆಗ್ಗಳಿಕೆ ಹಿಂದಿನ ಆರ್‌ಬಿಐ ಗವರ್ನರ್‌ಗಳಿಗೆ ಸಲ್ಲಬೇಕು ಎಂದು ಚಿದಂಬರಂ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಯುಪಿಎ ಯೋಜನೆಯನ್ನೇ ಮೋದಿ ಸರಕಾರವು ಜನಧನ ಯೋಜನೆಯೆಂದು ಮರುನಾಮಕರಣಗೊಳಿಸಿದೆ ಎಂದಿದ್ದಾರೆ.