ಬಿಜೆಪಿ ಸಂಸದ,ವಕೀಲ ಮತ್ತು ಮಾಧ್ಯಮಗಳ ವಿರುದ್ಧ ದಿಲ್ಲಿ ಹೈಕೋರ್ಟ್ ಮೊರೆಹೋದ ಸಂಸದೆ ಮೊಯಿತ್ರಾ

Update: 2023-10-17 18:18 GMT

ನಿಶಿಕಾಂತ್ ದುಬೆ - ಮಹುವಾ ಮೊಯಿತ್ರಾ

ಹೊಸದಿಲ್ಲಿ : ತನ್ನ ವಿರುದ್ಧ ಯಾವುದೇ ಸುಳ್ಳು ಮತ್ತು ಮಾನಹಾನಿಕರ ವಿಷಯವನ್ನು ಪೋಸ್ಟ್ ಮಾಡುವುದರಿಂದ ಬಿಜೆಪಿ ಸಂಸದ ನಿಶಿಕಾಂತ ದುಬೆ, ಸುಪ್ರೀಂ ಕೋರ್ಟ್ ವಕೀಲ ಜೈ ಅನಂತ ದೇಹದ್ರಾಯಿ, ಹಲವಾರು ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಮಾಧ್ಯಮ ಸಂಸ್ಥೆಗಳನ್ನು ನಿರ್ಬಂಧಿಸುವಂತೆ ಕೋರಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಮಂಗಳವಾರ ದಿಲ್ಲಿ ಉಚ್ಛ ನ್ಯಾಯಾಲಯದ ಮೆಟ್ಟಿಲುಗಳನ್ನೇರಿದ್ದಾರೆ.

ನ್ಯಾ.ಸಚಿನ್ ದತ್ತಾ ಅವರು ಈ ವಾರದಲ್ಲಿ ಪ್ರಕರಣದ ವಿಚಾರಣೆ ನಡೆಸುವ ಸಾಧ್ಯತೆಯಿದೆ. ಲೋಕಸಭೆಯಲ್ಲಿ ಪ.ಬಂಗಾಳದ ಕೃಷ್ಣನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಮೊಯಿತ್ರಾ ಪ್ರತಿವಾದಿಗಳ ವಿರುದ್ಧ ಶಾಶ್ವತ ತಡೆಯಾಜ್ಞೆ ಮತ್ತು ಪರಿಹಾರವನ್ನು ಕೋರಿದ್ದಾರೆ.

ಮೊಯಿತ್ರಾ ಸದನದಲ್ಲಿ ಪ್ರಶ್ನೆಗಳನ್ನು ಕೇಳಲು ಉದ್ಯಮಿ ದರ್ಶನ ಹಿರಾನಂದಿನಿ ಅವರಿಂದ ಲಂಚವನ್ನು ಸ್ವೀಕರಿಸಿದ್ದರು ಎಂದು ಆರೋಪಿಸಿರುವ ದುಬೆ, ತನ್ನ ಆರೋಪಗಳನ್ನು ಪರಿಶೀಲಿಸಲು ವಿಚಾರಣಾ ಸಮಿತಿಯೊಂದನ್ನು ರಚಿಸುವಂತೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಆಗ್ರಹಿಸಿದ್ದಾರೆ.

ವಕೀಲ ದೇಹದ್ರಾಯಿ ಅವರು ತನಗೆ ಬರೆದಿರುವ ಪತ್ರವನ್ನು ಉಲ್ಲೇಖಿಸಿರುವ ದುಬೆ, ಮೊಯಿತ್ರಾ ಹಿರಾನಂದಿನಿಯವರಿಂದ ಲಂಚ ಮತ್ತು ಉಡುಗೊರೆಗಳನ್ನು ಸ್ವೀಕರಿಸಿದ್ದಕ್ಕೆ ತಿರಸ್ಕರಿಸಲಾಗದ ಸಾಕ್ಷ್ಯಗಳನ್ನು ದೇಹದ್ರಾಯಿ ತನ್ನೊಂದಿಗೆ ಹಂಚಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಮೊಯಿತ್ರಾ ಇತ್ತೀಚಿನವರೆಗೆ ಸದನದಲ್ಲಿ ಕೇಳಿರುವ 61 ಪ್ರಶ್ನೆಗಳ ಪೈಕಿ 50 ಅದಾನಿ ಸಮೂಹವನ್ನು ಗುರಿಯಾಗಿಸಿಕೊಂಡಿದ್ದವು ಎಂದು ದುಬೆ ಸ್ಪೀಕರ್‌ಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ. ಉಚ್ಛ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ತನ್ನ ವಿರುದ್ಧದ ಆರೋಪಗಳನ್ನು ನಿರಾಕರಿಸಿರುವ ಮೊಯಿತ್ರಾ, ಅವು ತನ್ನ ವಿರುದ್ಧ ರೂಪಿಸಲಾಗಿರುವ ಸುಳ್ಳು ಆರೋಪಗಳಾಗಿವೆ ಎಂದು ವಾದಿಸಿದ್ದಾರೆ.

ತನ್ನ ವಿರುದ್ಧ ಪೋಸ್ಟ್ ಮಾಡಲಾಗಿರುವ ಎಲ್ಲ ಮಾನಹಾನಿಕರ ವಿಷಯಗಳನ್ನು ತಮ್ಮ ವೇದಿಕೆಗಳಿಂದ ತೆಗೆದುಹಾಕುವಂತೆ ಸಾಮಾಜಿಕ ಮಾಧ್ಯಮಗಳಿಗೆ ನಿರ್ದೇಶನವನ್ನೂ ಮೊಯಿತ್ರಾ ಕೋರಿದ್ದಾರೆ.

ದುಬೆ ದೂರು ನೀತಿ ಸಮಿತಿಗೆ ರವಾನೆ

ಸದನದಲ್ಲಿ ಪ್ರಶ್ನೆಗಳನ್ನು ಕೇಳಲು ಲಂಚವನ್ನು ಪಡೆದಿದ್ದಾರೆ ಎಂದು ದುಬೆ ಮೊಯಿತ್ರಾ ವಿರುದ್ಧ ಸಲ್ಲಿಸಿರುವ ದೂರನ್ನು ಸ್ಪೀಕರ್ ಬಿರ್ಲಾ ಲೋಕಸಭೆಯ ನೀತಿ ಸಮಿತಿಗೆ ರವಾನಿಸಿದ್ದಾರೆ. ಬಿಜೆಪಿ ಸಂಸದ ವಿನೋದ್ ಕುಮಾರ್ ಸೋನ್ಕರ್ ನೀತಿ ಸಮಿತಿಯ ಅಧ್ಯಕ್ಷರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News