ಮುಹಮ್ಮದ್ ಫೈಝಲ್ ಲೋಕಸಭಾ ಸದಸ್ಯತ್ವ ಮರುಸ್ಥಾಪನೆ

Update: 2023-11-03 14:47 GMT

Photo: Faceboook/Mohammed Faizal Padippura

ಹೊಸದಿಲ್ಲಿ: ಕೊಲೆ ಯತ್ನ ಪ್ರಕರಣವೊಂದರಲ್ಲಿ ಲಕ್ಷದ್ವೀಪದ ಎನ್‌ಸಿಪಿ ಸಂಸದ ಮುಹಮ್ಮದ್ ಫೈಝಲ್ ಅವರ ದೋಷನಿರ್ಣಯವನ್ನು ಸರ್ವೋಚ್ಚ ನ್ಯಾಯಾಲಯವು ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ಬಳಿಕ ಗುರುವಾರ ಲೋಕಸಭಾ ಸಚಿವಾಲಯವು ಅವರ ಸದಸ್ಯತ್ವವನ್ನು ಮರುಸ್ಥಾಪಿಸಿದೆ.

ಮುಂದಿನ ನ್ಯಾಯಾಂಗ ತೀರ್ಪುಗಳಿಗೊಳಪಟ್ಟು ಸದನದಿಂದ ಫೈಝಲ್ ಅವರ ಅನರ್ಹತೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಲೋಕಸಭಾ ಮಹಾ ಕಾರ್ಯದರ್ಶಿ ಉತ್ಪಲಕುಮಾರ ಸಿಂಗ್ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

2009ರ ಪ್ರಕರಣದಲ್ಲಿ ಫೈಝಲ್‌ರ ದೋಷನಿರ್ಣಯವನ್ನು ಅಮಾನತುಗೊಳಿಸಲು ಕೇರಳ ಉಚ್ಚ ನ್ಯಾಯಾಲಯವು ನಿರಾಕರಿಸಿದ ಬಳಿಕ ಅ.4ರಂದು ಈ ವರ್ಷದಲ್ಲಿ ಎರಡನೇ ಬಾರಿಗೆ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿತ್ತು.

ಆದರೆ ಅ.9ರಂದು ಉಚ್ಚ ನ್ಯಾಯಾಲಯದ ಆದೇಶಕ್ಕೆ ತಡೆಯನ್ನು ನೀಡಿದ್ದ ನ್ಯಾಯಮೂರ್ತಿಗಳಾದ ಹೃಷಿಕೇಶ ರಾಯ್ ಮತ್ತು ಸಂಜಯ ಕರೋಲ್ ಅವರ ಸುಪ್ರೀಂ ಕೋರ್ಟ್ ಪೀಠವು,ಈ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯದ ಆ.22ರ ಆದೇಶವು ಅನ್ವಯವಾಗುತ್ತದೆ ಎಂದು ಹೇಳಿತ್ತು.

ವಿಷಯವನ್ನು ಉಚ್ಚ ನ್ಯಾಯಾಲಯದ ಪರಿಶೀಲನೆಗೆ ಒಪ್ಪಿಸಿರುವಾಗ ಫೈಝಲ್‌ರ ದೋಷನಿರ್ಣಯದ ಅಮಾನತು ಮುಂದುವರಿಯುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯವು ಆಗಸ್ಟ್‌ನಲ್ಲಿ ಹೇಳಿತ್ತು.

ಲಕ್ಷದ್ವೀಪ ಸೆಷನ್ಸ್ ನ್ಯಾಯಾಲಯವು ಜ.11ರಂದು,2009ರ ಲೋಕಸಭಾ ಚುನಾವಣೆಗಳ ಸಂದರ್ಭದಲ್ಲಿ ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ನಾಯಕ ಪಿ.ಎಂ.ಸಯೀದ್ ಅವರ ಅಳಿಯ ಪಡನತ್ ಸಲಿಹ್ ಅವರ ಕೊಲೆ ಯತ್ನದ ಆರೋಪದಲ್ಲಿ ಫೈಝಲ್ ಮತ್ತು ಇತರ ನಾಲ್ವರನ್ನು ದೋಷಿಗಳು ಎಂದು ತೀರ್ಪು ನೀಡಿತ್ತು ಮತ್ತು ಅವರಿಗೆ 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಈ ದೋಷನಿರ್ಣಯದ ಬಳಿಕ ಫೈಝಲ್ ಮೊದಲ ಬಾರಿಗೆ ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡಿದ್ದರು.

ಇದನ್ನು ಫೈಝಲ್ ಕೇರಳ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು,ಅದು ಜ.25ರಂದು ಅವರ ದೋಷನಿರ್ಣಯ ಮತ್ತು ಶಿಕ್ಷೆಯನ್ನು ಅಮಾನತುಗೊಳಿಸಿತ್ತು.

ಫೈಝಲ್‌ರ ಅನರ್ಹತೆಯು ಅವರ ಕ್ಷೇತ್ರದಲ್ಲಿ ಮರು ಚುನಾವಣೆಗೆ ಕಾರಣವಾಗುತ್ತದೆ ಮತ್ತು ಇದು ಸರಕಾರ ಹಾಗೂ ಸಾರ್ವಜನಿಕರ ಮೇಲೆ ಹಣಕಾಸು ಹೊರೆಯನ್ನುಂಟು ಮಾಡುತ್ತದೆ ಎಂದು ಹೇಳಿದ್ದ ಉಚ್ಚ ನ್ಯಾಯಾಲಯವು,ಹೊಸ ಚುನಾವಣೆ ಪ್ರಕ್ರಿಯೆಯು ಲಕ್ಷದ್ವೀಪದಲ್ಲಿಯ ವಿವಿಧ ಅಭಿವೃದ್ಧಿ ಚಟುವಟಿಕೆಗಳನ್ನು ಕೆಲವು ವಾರಗಳ ಕಾಲ ಸ್ಥಗಿತಗೊಳಿಸುತ್ತದೆ ಎಂದೂ ತಿಳಿಸಿತ್ತು.

ಮಾ.19ರಂದು ಫೈಝಲ್‌ರ ಲೋಕಸಭಾ ಸದಸ್ಯತ್ವವನ್ನು ಮರುಸ್ಥಾಪಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News