ಬಹುಕೋಟಿ ಪಡಿತರ ಹಗರಣ ; ಕೋಲ್ಕತಾದ ವಿವಿಧೆಡೆ ಈಡಿ ದಾಳಿ
ಕೋಲ್ಕತಾ : ಪಶ್ಚಿಮ ಬಂಗಾಳದಲ್ಲಿ ನಡೆದಿದೆಯೆನ್ನಲಾದ ಬಹುಕೋಟಿ ಪಡಿತರ ಹಗರಣದ ಬಗ್ಗೆ ನಡೆಯುತ್ತಿರುವ ತನಿಖೆಗೆ ಸಂಬಂಧಿಸಿ ಜಾರಿ ನಿರ್ದೇಶನಾಲಯ(ಈಡಿ)ವು ಮಹಾನಗರದ ಹಲವು ಸ್ಥಳಗಳಲ್ಲಿ ದಾಳಿಗಳನ್ನು ಆರಂಭಿಸಿದೆ.
ಭದ್ರತಾಪಡೆಗಳ ಬೆಂಗಾವಲಿನೊಂದಿಗೆ ಜಾರಿ ನಿರ್ದೇಶನಾಲಯದ ತಂಡಗಳು ಕೋಲ್ಕತಾದ ಸಾಲ್ಟ್ಲೇಕ್, ಕೈಖಾಲಿ, ಮಿರ್ಝಾ ಗಾಲಿಬ್ ರಸ್ತೆ, ಹೌರಾ ಮತ್ತಿತರ ಸ್ಥಳಗಳಲ್ಲಿ ದಾಳಿಗಳನ್ನು ನಡೆಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘‘ ಈ ದಾಳಿಗಳು ಪಡಿತರ ವಿತರಣೆ ಹಗರಣಕ್ಕೆ ಸಂಬಂಧಿಸಿ ಈ ದಾಳಿಗಳನ್ನು ಆಯೋಜಿಸಲಾಗಿದೆ. ಉತ್ತರ 24 ಪರಗಣ ಜಿಲ್ಲೆಯ ಬಾಂಗಾವೊನ್ನ ವಿದೇಶಿ ವಿನಿಮಯ ವ್ಯಾಪಾರಿ ಸೇರಿದಂತೆ ಮೂವರಿಗೆ ಸೇರಿದ ಸ್ಥಳಗಳಲ್ಲಿ ದಾಳಿಗಳನ್ನು ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.
‘‘ ಈ ಬಹುಕೋಟಿ ಹಗರಣದಲ್ಲಿ ವಿದೇಶದಲ್ಲಿರುವ ವಿವಿಧ ಖಾತೆಗಳಿಗೆ ನಿಧಿಗಳನ್ನು ವರ್ಗಾಯಿಸಲಾಗಿದೆ. ಬಾಂಗಾವೊನ್ನ ಉದ್ಯಮಿಯು, ಬಂಧಿತ ಟಿಎಂಸಿ ನಾಯಕ ಶಂಕರ್ ಆದ್ಯ ಜೊತೆ ಉತ್ತಮ ನಂಟನ್ನು ಹೊಂದಿದ್ದಾರೆ ಎಂದು ಜಾರಿ ನಿರ್ದೇಶನಾಲ ಅಧಿಕಾರಿಗಳು ಹೇಳಿದ್ದಾರೆ.
ಬಂಗಾವೊನ್ ನಗರಸಭೆಯ ಮಾಜಿ ಅಧ್ಯಕ್ಷರಾಗಿರುವ ಶಂಕರ್ ಆದ್ಯ ಅವರು ತನ್ನ ಕುಟುಂಬಿಕರ ಹೆಸರಿನಲ್ಲಿ ನೋಂದಣಿಯಾದಂತಹ ಕನಿಷ್ಠ 90 ವಿದೇಶಿ ವಿನಿಮಯ ವ್ಯಾಪಾರ ಕಂಪೆನಿಗಳ ಒಡೆತನ ಹೊಂದಿದ್ದಾರೆಂದು ಈಡಿ ಆಪಾದಿಸಿದೆ.
ಕೋಲ್ಕತಾದ ಸಾಲ್ಟ್ಲೇಕ್ನಲ್ಲಿರುವ ಶಂಕರ್ ಆದ್ಯ ಅವರ ಕಚೇರಿ ಹಾಗೂ ಇಎಂ ಬೈಪಾಸ್ ಪ್ರದೇಶದಲ್ಲಿರುವ ಅವರ ಎರಡು ಫ್ಲ್ಯಾಟ್ ಗಳ ಮೇಲೂ ದಾಳಿಗಳು ನಡೆದಿರುವುದಾಗಿ ಅವರು ತಿಳಿಸಿದರು.
ಪಡಿತರ ಹಗರಣದಲ್ಲಿ ಶಾಮೀಲಾಗಿರುವ ಆರೋಪದಲ್ಲಿ ಜಾರಿ ನಿರ್ದೇಶನಾಲಯವು ಈ ಮೊದಲು ರಾಜ್ಯ ಆಹಾರ ಸಚಿವರಾಗಿದ್ದು, ನಂತರ ಅರಣ್ಯ ಸಚಿವರಾಗಿದ್ದ ಜ್ಯೋತಿ ಪ್ರಿಯ ಮಲಿಕ್ ಅವರನ್ನು ಈಡಿ ಬಂಧಿಸಿತ್ತು ಈ ಮಧ್ಯೆ ತಲೆಮರೆಸಿಕೊಂಡಿದ್ದ ಇನ್ನೋರ್ವ ಆರೋಪಿ, ಟಿಎಂಸಿ ನಾಯಕ ಶಾಜಹಾನ್ ಶೇಖ್ ಅವರ ಬಂಧನಕ್ಕಾಗಿ ತೀವ್ರ ಶೋಧಕಾರ್ಯಾಚರಣೆ ನಡೆಸಿದೆ.