ಮುಂಬೈ ಜಾಹೀರಾತು ಫಲಕ ಕುಸಿತ: ಮೃತರ ಸಂಖ್ಯೆ 14ಕ್ಕೆ ಏರಿಕೆ; 74 ಮಂದಿಯ ರಕ್ಷಣೆ

Update: 2024-05-14 06:39 GMT

ಮುಂಬೈ: ಮುಂಬೈನ ಘಾಟ್ಕೋಪುರ್ ಪ್ರದೇಶದಲ್ಲಿ ಸಂಭವಿಸಿದ ಬೃಹತ್ ಜಾಹೀರಾತು ಫಲಕ ಕುಸಿತ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಮಂಗಳವಾರದ ವೇಳೆಗೆ 14ಕ್ಕೆ ಏರಿಕೆಯಾಗಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಪ್ರಕಾರ, ಘಟನಾ ಸ್ಥಳದಿಂದ ಈವರೆಗೆ 74 ಮಂದಿಯನ್ನು ರಕ್ಷಿಸಲಾಗಿದ್ದು, 14 ಮಂದಿ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ.

ಈ ಘಟನೆಯ ಒಟ್ಟು ಸಂತ್ರಸ್ತರ ಸಂಖ್ಯೆ 88 ಆಗಿದೆ.

ಈ ಕುರಿತು ಸೋಮವಾರ ಪ್ರತಿಕ್ರಿಯಿಸಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಇನ್ಸ್ ಪೆಕ್ಟರ್ ಗೌರವ್ ಚೌಹಾಣ್, “ಸಂಜೆ 5 ಗಂಟೆಯ ವೇಳೆಗೆ ಈ ಘಟನೆ ವರದಿಯಾಯಿತು. ಬೃಹತ್ ಜಾಹೀರಾತು ಫಲಕವೊಂದು ಸಮೀಪದ ಪೆಟ್ರೋಲ್ ಬಂಕ್ ಮೇಲೆ ಉರುಳಿ ಬಿದ್ದಿತು. ಈವರೆಗೆ ಸುಮಾರು 65 ಮಂದಿಯನ್ನು ರಕ್ಷಿಸಲಾಗಿದೆ. ಅವಶೇಷಗಳಡಿ ಸಿಲುಕಿದ್ದ ನಾಲ್ವರನ್ನು ರಕ್ಷಿಸಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು, ನಾಲ್ಕು ಮೃತದೇಹಗಳನ್ನು ಪತ್ತೆ ಹಚ್ಚಿದೆ. ಯಾವುದೇ ಅಗ್ನಿ ಅವಘಢ ಸಂಭವಿಸಬಾರದು ಎಂಬ ಕಾರಣಕ್ಕೆ ನಾವು ಹೈಡ್ರಾಲಿಕ್ ಹಾಗೂ ಗ್ಯಾಸೊಲಿನ್ ಸಾಧನಗಳನ್ನು ಬಳಸಲು ಸಾಧ್ಯವಾಗುತ್ತಿಲ್ಲ. ನಾವು ಅವಶೇಷಗಳನ್ನು ತೆರವುಗೊಳಿಸಲು ಕ್ರೇನ್ ಗಳನ್ನು ಬಳಸುತ್ತಿದ್ದೇವೆ. ಮೂವರನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು ರಕ್ಷಿಸಿದೆ. ಅದಕ್ಕೂ ಮುನ್ನ 65 ಮಂದಿಯನ್ನು ರಕ್ಷಿಸಲಾಗಿತ್ತು. ಬೆಳಗ್ಗೆಯವರೆಗೆ ರಕ್ಷಣಾ ಕಾರ್ಯಾಚರಣೆ ಮುಂದುವರಿಯಲಿದೆ” ಎಂದು ANI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಮಹತ್ವದ ಬೆಳವಣಿಗೆಯೊಂದರಲ್ಲಿ ಪೆಟ್ರೋಲ್ ಪಂಪ್ ಮಾಲಕ ಭವೇಶ್ ಭಿಡೆ ವಿರುದ್ಧ ಮುಂಬೈ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ ಗಳಾದ 304, 338, 337 ಹಾಗೂ 34ರ ಅಡಿ ಪಂತ್ ನಗರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ನಡುವೆ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಮೃತ ವ್ಯಕ್ತಿಗಳ ಕುಟುಂಬಗಳ ಸದಸ್ಯರಿಗೆ ತಲಾ ರೂ. 5 ಲಕ್ಷ ಪರಿಹಾರ ಪ್ರಕಟಿಸಿದ್ದಾರೆ. ಈ ಘಟನೆಯಲ್ಲಿ ಗಾಯಗೊಂಡಿರುವ ಎಲ್ಲರ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸಲಿದೆ ಎಂದೂ ಶಿಂದೆ ಘೋಷಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News