ಮುಂಬೈ ಹೋರ್ಡಿಂಗ್ ದುರಂತ ಪೂರ್ಣಗೊಂಡ ರಕ್ಷಣಾ ಕಾರ್ಯಾಚರಣೆ | ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿಕೆ

Update: 2024-05-16 15:48 GMT

PC : PTI 

ಮುಂಬೈ: ಇಲ್ಲಿನ ಘಾಟ್ಖೋಪರ್ನಲ್ಲಿ ಹೋರ್ಡಿಂಗ್ ದುರಂತ ಸಂಭವಿಸಿದ ಸ್ಥಳದಲ್ಲಿ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ಗುರುವಾರ ಬೆಳಗ್ಗೆ ಅಂತ್ಯಗೊಂಡಿದೆ ಎಂದು ಕೇಂದ್ರ ವಿಪತ್ತು ನಿರ್ವಹಣಾ ದಳ(NDRF)ದ ಅಧಿಕಾರಿ ತಿಳಿಸಿದ್ದಾರೆ.

ಭಾರೀ ಮಳೆ ಹಾಗೂ ಧೂಳಿನ ಬಿರುಗಾಳಿಗೆ ಘಾಟ್ಖೋಪರ್ನ ಛೆಡ್ಡಾ ನಗರ ಪ್ರದೇಶದಲ್ಲಿರುವ 120 X 120 ಅಡಿ ಎತ್ತರದ ಬೃಹತ್ ಹೋರ್ಡಿಂಗ್ ಪೆಟ್ರೋಲ್ ಬಂಕ್ ಮೇಲೆ ಸೋಮವಾರ ಸಂಜೆ ಕುಸಿದ ಬಳಿಕ 66 ಗಂಟೆಗಳ ಕಾಲ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ ಅವರು ತಿಳಿಸಿದ್ದಾರೆ.

ಕಾರ್ಯಾಚರಣೆಯನ್ನು ಗುರುವಾರ ಬೆಳಗ್ಗೆ 10.30ಕ್ಕೆ ಅಂತ್ಯಗೊಳಿಸಲಾಗಿದೆ. ಸ್ಥಳ ಪರಿಶೀಲನೆ ನಡೆಸಿದ ಬಳಿಕ ಬಿಎಂಸಿ ಆಯುಕ್ತ ಭೂಷಣ್ ಗಗ್ರಾನಿ ಅವರು ಈ ಕುರಿತು ಘೋಷಣೆ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಬುಧವಾರ ತಡ ರಾತ್ರಿ ಹೋರ್ಡಿಂಗ್ನ ಅಡಿಯಲ್ಲಿ ಸಿಲುಕಿದ್ದ ಕಾರಿನಲ್ಲಿದ್ದ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ)ನ ನಿವೃತ್ತ ಜನರಲ್ ಮ್ಯಾನೇಜರ್ ಹಾಗೂ ಅವರ ಪತ್ನಿಯ ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಇದರೊಂದಿಗೆ ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಅಲ್ಲದೆ, ಗಾಯಗೊಂಡವರ ಸಂಖ್ಯೆ 75ಕ್ಕೆ ಏರಿಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಹೋರ್ಡಿಂಗ್ ನ 5 ಅಂತರ್ ಜೋಡಣೆಗೊಂಡ ಗರ್ಡರ್ನಗಳನ್ನು ಒಂದೊಂದಾಗಿ ಕತ್ತರಿಸಲಾಯಿತು ಹಾಗೂ ದಂಪತಿಯ ಮೃತದೇಹಗಳನ್ನು ಹೊರತೆಗೆಯಲಾಯಿತು ಎಂದು ಅವರು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಗಗ್ರಾನಿ, ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 16ಕ್ಕೆ ತಲುಪಿದೆ. ದುರಂತ ನಡೆಸ ಸ್ಥಳದಲ್ಲಿ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದೆ. ಅಲ್ಲಿ ಯಾರಾದರೂ ಸಿಲುಕಿದ್ದಾರೆಯೋ ಎಂದು ಕೂಲಂಕುಷವಾಗಿ ಪರಿಶೀಲಿಸಲಾಗಿದೆ. ಈಗ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಮುಂದುವರಿದಿದೆ ಎಂದು ಅವರು ತಿಳಿಸಿದರು.

ರಕ್ಷಣಾ ಕಾರ್ಯಾಚರಣೆಯಲ್ಲಿ ಬಿಎಂಸಿ, ಮುಂಬೈ ಪೊಲೀಸ್, ಬಿಪಿಸಿಎಲ್, NDRF, ಮುಂಬೈ ಅಗ್ನಿ ಶಾಮಕ ದಳ ಹಾಗೂ ಮಹಾನಗರ್ ಗ್ಯಾಸ್ನಂತಹ ಸಂಸ್ಥೆಗಳು ಪಾಲ್ಗೊಂಡಿವೆ. ಪ್ರತಿಯೊಂದು ಇಲಾಖೆಯೂ ಸಮನ್ವತೆಯಿಂದ ಕೆಲಸ ಮಾಡಿವೆ ಎಂದು ಅವರು ತಿಳಿಸಿದ್ದಾರೆ.

ಅಕ್ರಮ ಹಾಗೂ ಅನುಮತಿ ಇಲ್ಲದೆ ಹೋರ್ಡಿಂಗ್ ಅಳವಡಿಸಿದವರ ವಿರುದ್ಧ ಕ್ರಮ ಕೈಗೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಹೋರ್ಡಿಂಗ್ ಗಳು ಯಾರಿಗೇ ಸೇರಿದ್ದು, ಅದು ಯಾರ ಜಾಗದಲ್ಲಿದೆ ಎಂಬುದು ಮುಖ್ಯವಲ್ಲ. ಅವು ಸರಿಯಾದ ಕ್ರಮದಲ್ಲಿ ಅಳವಡಿಸಿರುವುದು ಮುಖ್ಯ ಎಂದು ಗಗ್ರಾನಿ ಹೇಳದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News