ಛತ್ತೀಸ್‌ಗಡದಲ್ಲಿ ನಕ್ಸಲ್ ಹಿಂಸಾಚಾರ ಶೇ. 47 ಇಳಿಕೆ: ಸರಕಾರ

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: 2010ಕ್ಕೆ ಹೋಲಿಸಿದರೆ 2024ರ ವೇಳೆ ಛತ್ತೀಸ್‌ಗಡದಲ್ಲಿ ನಕ್ಸಲ್ ಹಿಂಸಾಚಾರದ ಘಟನೆಗಳು ಶೇ. 47 ಇಳಿಕೆಯಾಗಿದೆ. ನಕ್ಸಲ್ ಹಿಂಸಾಚಾರದಿಂದ ನಾಗರಿಕರು ಹಾಗೂ ಭದ್ರತಾ ಪಡೆ ಸಿಬ್ಬಂದಿ ಸಾವಿನ್ನಪ್ಪಿದ ಪ್ರಮಾಣ ಶೇ. 64 ಇಳಿಕೆಯಾಗಿದೆ ಎಂದು ಸರಕಾರ ಮಂಗಳವಾರ ಲೋಕಸಭೆಗೆ ತಿಳಿಸಿದೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗೃಹ ಖಾತೆಯ ಸಹಾಯಕ ಸಚಿವ ನಿತ್ಯಾನಂದ ರಾಯ್, 2010ಕ್ಕೆ ಹೋಲಿಸಿದರೆ 2024ರಲ್ಲಿ ರಾಜ್ಯದಲ್ಲಿ ನಕ್ಸಲ್ ಹಿಂಸಾಚಾರದ 267 ಪ್ರಕರಣಗಳು ದಾಖಲಾಗಿವೆ. 2010ರಲ್ಲಿ ನಕ್ಸಲ್ ಹಿಂಸಾಚಾರದ 499 ಪ್ರಕರಣಗಳು ವರದಿಯಾಗಿದ್ದವು ಎಂದಿದ್ದಾರೆ.
2010ಕ್ಕೆ ಹೋಲಿಸಿದರೆ 2024ರಲ್ಲಿ ನಕ್ಸಲ್ ಹಿಂಸಾಚಾರದಲ್ಲಿ ಸಾವನ್ನಪ್ಪಿದ ನಾಗರಿಕರು ಹಾಗೂ ಭದ್ರತಾ ಸಿಬ್ಬಂದಿಯ ಸಂಖ್ಯೆ ಶೇ. 64 ಇಳಿಕೆಯಾಗಿದೆ. ನಕ್ಸಲ್ ಹಿಂಸಾಚಾರದಲ್ಲಿ 2010ರಲ್ಲಿ 343 ಮಂದಿ ಮೃತಪಟ್ಟಿದ್ದರೆ, 2024ರಲ್ಲಿ 122 ಮಂದಿ ಮೃತಪಟ್ಟಿರುವುದು ವರದಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಭದ್ರತಾ ಸಂಬಂಧಿ ವೆಚ್ಚ (ಎಸ್‌ಆರ್‌ಇ) ಯೋಜನೆ ಅಡಿಯಲ್ಲಿ ಎಲ್ಲಾ ನಕ್ಸಲ್ ಪೀಡಿತ ರಾಜ್ಯಗಳಿಗೆ ಬಿಡುಗಡೆ ಮಾಡಲಾದ 1925.83 ಕೋ.ರೂ.ನಲ್ಲಿ ಶೇ. 43ಕ್ಕೂ ಅಧಿಕ ರಾಜ್ಯ ಸ್ವೀಕರಿಸಿದೆ ಎಂದು ಅವರು ಹೇಳಿದರು.
ನಕ್ಸಲ್ ಹಿಂಸಾಚಾರದಲ್ಲಿ ಹತ್ಯೆಯಾದ ನಾಗರಿಕರು ಹಾಗೂ ಭದ್ರತಾ ಪಡೆಗಳ ಸಿಬ್ಬಂದಿಯ ಕುಟುಂಬಗಳಿಗೆ ಪರಿಹಾರ ವಿತರಣೆ ಮೂಲಕ ಸಾಮರ್ಥ್ಯ ವೃದ್ಧಿಗೆ, ಭದ್ರತಾ ಪಡೆಗಳಿಗೆ ತರಬೇತು ಹಾಗೂ ಕಾರ್ಯಾಚರಣೆಯ ಅಗತ್ಯತೆಗೆ, ಶರಣಾಗತ ನಕ್ಸಲೀಯರ ಪುನರ್ವಸತಿಗೆ, ಸಮುದಾಯ ಪೊಲೀಸ್ ವ್ಯವಸ್ಥೆಗೆ ಹಾಗೂ ನಕ್ಸಲ್ ಹಿಂಸಾಚಾರದಿಂದ ಸೊತ್ತಿಗೆ ಹಾನಿ ಉಂಟಾದ ಭದ್ರತಾ ಪಡೆ ಸಿಬ್ಬಂದಿ ಹಾಗೂ ನಾಗರಿಕರಿಗೆ ಪರಿಹಾರ ನೀಡಲು ನಕ್ಸಲ್ ಪೀಡಿತ ರಾಜ್ಯಗಳಿಗೆ ಎಸ್‌ಆರ್‌ಇ ಯೋಜನೆ ಅನುದಾನ ಪೂರೈಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಈ ಯೋಜನೆ ಅಡಿಯಲ್ಲಿ ಕಳೆದ ಐದು ವರ್ಷಗಳಲ್ಲಿ (2019-20ರಿಂದ ಇಂದಿನ ದಿನಾಂಕದ ವರೆಗೆ) ಎಲ್ಲಾ ನಕ್ಸಲ್ ಪೀಡಿತ ರಾಜ್ಯಗಳಿಗೆ 1925.83 ಕೋ.ರೂ. ಬಿಡುಗಡೆ ಮಾಡಲಾಗಿದೆ. ಇದು ಛತ್ತೀಸ್‌ಗಢಕ್ಕೆ ನೀಡಿದ 829.80 ಕೋ.ರೂ.ವನ್ನು ಕೂಡ ಒಳಗೊಂಡಿದೆ ಎಂದು ಸಚಿವರು ತಿಳಿಸಿದ್ದಾರೆ.