"ನೀರಜ್ ಚೋಪ್ರಾ ಚಾಂಪಿಯನ್, ಹುಲಿಯಂತೆ ಹೋರಾಡಿದರು": ಎಎಫ್ಐ ಮೆಚ್ಚುಗೆ

Update: 2024-08-09 04:00 GMT

PC: x.com/mufaddal_vohra

ಹೊಸದಿಲ್ಲಿ: ಪ್ಯಾರಿಸ್ ಒಲಿಂಪಿಕ್ಸ್ನ ಜಾವೆಲಿನ್ ಎಸೆತದಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡ ಭಾರತದ ಸ್ಟಾರ್ ಅಥ್ಲೀಟ್ ನೀರಜ್ ಚೋಪ್ರಾ ಅವರನ್ನು ಭಾರತದ ಅಥ್ಲೆಟಿಕ್ಸ್ ಫೆಡರೇಷನ್ (ಎಎಫ್ಐ) ಅಧ್ಯಕ್ಷ ಅದಿಲ್ ಸುಮಾರಿವಾಲಾ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಈ ಐತಿಹಾಸಿಕ ಸಾಧನೆ ಮಾಡುವ ನಿಟ್ಟಿನಲ್ಲಿ "ಚೋಪ್ರಾ ಹುಲಿಯಂತೆ ಹೋರಾಡಿದರು" ಎಂದು ಅವರು ಬಣ್ಣಿಸಿದ್ದಾರೆ.

ಅತ್ಯುತ್ತಮ ಪ್ರದರ್ಶನ ತೋರಿ 89.45 ಮೀಟರ್ ಎಸೆದರೂ, 26 ವರ್ಷ ವಯಸ್ಸಿನ ಚೋಪ್ರಾ ಈ ಬಾರಿ ಚಿನ್ನ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಎರಡನೇ ಪ್ರಯತ್ನದಲ್ಲಿ ಉತ್ತಮ ಪ್ರದರ್ಶನ ತೋರಿದರೂ, ಸತತ ನಾಲ್ಕು ಫೌಲ್ಗಳು ದೊಡ್ಡ ಸಮಸ್ಯೆಯಾದವು. ಇದು ಚಿನ್ನದ ಪದಕ ಗಳಿಸುವ ಅವರ ಪ್ರಯತ್ನಕ್ಕೆ ತಡೆಯಾಯಿತು. ಇಷ್ಟಾಗಿಯೂ ಸ್ವಾತಂತ್ರ್ಯೋತ್ತರ ಭಾರತದಲ್ಲಿ ವೈಯಕ್ತಿಕ ಸ್ಪರ್ಧೆಯಲ್ಲಿ ಎರಡು ಒಲಿಂಪಿಕ್ ಪದಕಗಳನ್ನು ಗೆದ್ದ ಎರಡನೇ ಪುರುಷ ಅಥ್ಲೀಟ್ ಎಂಬ ದಾಖಲೆಗೆ ಅವರು ಪಾತ್ರರಾದರು.

"ಜನ ಸಾಮಾನ್ಯವಾಗಿ ಪದಕಗಳ ಬಗ್ಗೆ ಹೆಚ್ಚಿನ ಒತ್ತು ನೀಡುತ್ತಾರೆ. ಆದರೆ ವೈಯಕ್ತಿಕವಾಗಿ ನಾನು ಅದನ್ನು ಒಪ್ಪುವುದಿಲ್ಲ. ಗಾಯದ ಸಮಸ್ಯೆಯನ್ನು ಮೀರಿ ನಿಂತು ಬೆಳ್ಳಿ ಪದಕ ಗೆದ್ದಿದ್ದಾರೆ. ಫೈನಲ್ ನಲ್ಲಿ ನಂಬಲಸಾಧ್ಯ ಉತ್ತಮ ಸಾಧನೆ ತೋರಿದ್ದಾರೆ" ಎಂದು ಗುಣಗಾನ ಮಾಡಿದರು.

ಟೋಕಿಯೊದಲ್ಲಿ ಚೋಪ್ರಾ ಚಿನ್ನ ಗೆದ್ದಿದ್ದರು. ಆದರೆ ಇಂದು ಟೋಕಿಯೋದಲ್ಲಿ ಎಸೆದದ್ದಕ್ಕಿಂತ ಎರಡು ಮೀಟರ್ ಹೆಚ್ಚು ದೂರಕ್ಕೆ ಜಾವೆಲಿನ್ ಎಸೆದರೂ ಬೆಳ್ಳಿಗೆ ತೃಪ್ತಿಪಡಬೇಕಾಯಿತು. ಸೀಸನ್ ನ ಅತ್ಯುತ್ತಮ ಸಾಧನೆಯನ್ನು ಅವರು ಮಾಡಿದ್ದಾರೆ. ಅವರು ಹುಲಿ. ಹುಲಿಯಂತೆ ಹೋರಾಡಿದರು. ಗಾಯದಿಂದ ಗುಣಮುಖರಾದ ಅವರ ಸಾಧನೆ ನಿಜಕ್ಕೂ ಅತ್ಯುತ್ತಮ. ಅವರು ಚಾಂಪಿಯನ್. ಚಾಂಪಿಯನ್ನರು ರೂಪುಗೊಳ್ಳುವುದು ಹೀಗೆ" ಎಂದು ಬಣ್ಣಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News