ಮಹಾರಾಷ್ಟ್ರ: ಪಕ್ಷೇತರ ಸಂಸದನಿಂದ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಘೋಷಣೆ
ಮುಂಬೈ: ಮಹಾರಾಷ್ಟ್ರದ ಸಾಂಗ್ಲಿ ಲೋಕಸಭಾ ಕ್ಷೇತ್ರದಿಂದ ನೂತನವಾಗಿ ಆಯ್ಕೆಯಾಗಿರುವ ಪಕ್ಷೇತರ ಸಂಸದ ವಿಶಾಲ್ ಪಾಟೀಲ್ ಅವರು ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಬೆಂಬಲ ನೀಡಿದ್ದಾರೆ.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕರಾದ ವಸಂತದಾದಾ ಪಾಟೀಲ್ ಅವರ ಮೊಮ್ಮಗನಾದ ವಿಶಾಲ್ ಪಾಟೀಲ್, ಸಾಂಗ್ಲಿ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಜಯ ಸಾಧಿಸಿದ್ದರು. ಮಹಾವಿಕಾಸ್ ಅಘಾಡಿ ಮೈತ್ರಿಕೂಟದ ಒಪ್ಪಂದದಂತೆ ಈ ಕ್ಷೇತ್ರವನ್ನು ಶಿವಸೇನೆ (ಉದ್ಧವ್ ಠಾಕ್ರೆ) ಬಣಕ್ಕೆ ಬಿಟ್ಟು ಕೊಡಲಾಗಿತ್ತು.
ಹೀಗಾಗಿ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿಶಾಲ್ ಪಾಟೀಲ್, ತಮ್ಮ ಸಮೀಪದ ಪ್ರತಿಸ್ಪರ್ಧಿ ಸಂಜಯ್ ಪಾಟೀಲ್ ಎದುರು 1,00,053 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಗುರುವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾದ ವಿಶಾಲ್ ಪಾಟೀಲ್, ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಬೆಂಬಲದ ಪತ್ರವನ್ನು ಹಸ್ತಾಂತರಿಸಿದರು. ಇದಾದ ನಂತರ, ಅವರು ಕಾಂಗ್ರೆಸ್ ಹಿರಿಯ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನೂ ಭೇಟಿಯಾದರು.