ಎಲ್ಲವನ್ನೂ ಪಡೆದ ನಂತರ ಪಕ್ಷ ತೊರೆಯುವುದು ಹೇಡಿತನದ ಕ್ರಮ: ಮಲ್ಲಿಕಾರ್ಜುನ ಖರ್ಗೆ ಕಿಡಿ

Update: 2024-02-16 16:52 GMT

ಮಲ್ಲಿಕಾರ್ಜುನ ಖರ್ಗೆ | Photo:PTI 

ಹೊಸದಿಲ್ಲಿ: ಎಲ್ಲವನ್ನೂ ಪಡೆದ ನಂತರ ಪಕ್ಷವನ್ನು ತೊರೆದಿರುವ ಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಇದು ಹೇಡಿತನದ ಕ್ರಮವಾಗಿದೆ ಎಂದು ಕಿಡಿ ಕಾರಿದ್ದಾರೆ.

ಮುಂಬೈನಲ್ಲಿ ಆಯೋಜಿಸಲಾಗಿದ್ದ ಕಾರ್ಯಕರ್ತರ ಸಮ್ಮೇಳನಕ್ಕೆ ವಿಡಿಯೊ ಸಂದೇಶದ ಮೂಲಕ ತಮ್ಮ ಹೇಳಿಕೆ ನೀಡಿರುವ ಮಲ್ಲಿಕಾರ್ಜುನ ಖರ್ಗೆ, ಇತ್ತೀಚೆಗೆ ಸಭಾಧ್ಯಕ್ಷರ ಚಹಾ ಕೂಟದಲ್ಲಿ ನೀವೇಕೆ ಜನರನ್ನು ನಿಮ್ಮ (ಬಿಜೆಪಿ) ಪಕ್ಷವನ್ನು ಸೇರ್ಪಡೆಯಾಗುವಂತೆ ಬಲವಂತ ಪಡಿಸುತ್ತಿದ್ದೀರಿ ಎಂದು ನಾನು ನರೇಂದ್ರ ಮೋದಿಯವರನ್ನು ಪ್ರಶ್ನಿಸಿದಾಗ, ಅದಕ್ಕೆ ಮೋದಿ, ಅವರು ನಮ್ಮ ದಾರಿಗೆ ಬರುತ್ತಾರೆಂದು ಎಂದು ಪ್ರತ್ಯುತ್ತರ ನೀಡಿದರು ಎಂಬ ಸಂಗತಿಯನ್ನು ಖರ್ಗೆ ಬಹಿರಂಗಗೊಳಿಸಿದ್ದಾರೆ.

ಇತರ ಪಕ್ಷಗಳು ನಾಯಕರನ್ನು ತಮ್ಮತ್ತ ಸೆಳೆಯಲು ಪ್ರಯತ್ನಿಸುತ್ತಲೇ ಇರುತ್ತವೆ. ಆದರೆ, ಇದು ಸಿದ್ಧಾಂತಕ್ಕೆ ಸಂಬಂಧಿಸಿದ ವಿಷಯವಾಗಿದ್ದು, ಅದನ್ನು ಪಾಲಿಸಲೇಬೇಕಿದೆ. ನಾಯಕರನ್ನು ರೂಪಿಸಲು ಪಕ್ಷದ ಕಾರ್ಯಕರ್ತರು ತಮ್ಮೆಲ್ಲವನ್ನೂ ಧಾರೆ ಎರೆದಿರುತ್ತಾರೆ. ಆದರೆ ಕೆಲವು ನಾಯಕರು ಎಲ್ಲವನ್ನೂ ಪಡೆದ ನಂತರ ಪಕ್ಷವನ್ನು ತೊರೆದರೆ, ಅದು ಹೇಡಿತನದ ಕ್ರಮವಾಗುತ್ತದೆ ಎಂದು ಯಾರ ಹೆಸರನ್ನೂ ಉಲ್ಲೇಖಿಸದೆ ಖರ್ಗೆ ಕಿಡಿ ಕಾರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರನ್ನೂ ಕಟುವಾಗಿ ಟೀಕಿಸಿದ ಖರ್ಗೆ, ನರೇಂದ್ರ ಮೋದಿ ಇಷ್ಟು ವರ್ಷಗಳಿಂದ ಸುಳ್ಳನ್ನೇ ಹೇಳಿಕೊಂಡು ಬರುತ್ತಿದ್ದು, ಅವರೇನಾದರೂ ಮತ್ತೆ ಪ್ರಧಾನಿಯಾಗಿ ಚುನಾಯಿತರಾದರೆ, ಅದು ದೇಶದ ಪ್ರಜಾಪ್ರಭುತ್ವದ ಅಂತ್ಯವಾಗಲಿದೆ ಎಂದು ಎಚ್ಚರಿಸಿದರು. ಅದರಿಂದ ಪ್ರಜಾಪ್ರಭುತ್ವ ಮತ್ತು ಸಂವಿಧಾನ ನಾಶವಾಗಲಿದ್ದು, ಸಂವಿಧಾನ ನಾಶವಾದರೆ, ತಾವು ಪಡೆದಿರುವ ಎಲ್ಲ ಹಕ್ಕುಗಳಿಂದಲೂ ಜನತೆ ನಿರಾಕರಣೆಗೊಳಗಾಗಲಿದ್ದಾರೆ ಎಂದೂ ಎಚ್ಚರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News