ಇವಿಎಂಗಳಿಗೆ ಹಾನಿ ಪ್ರಕರಣ | ಜೆಡಿಎಸ್ ನಾಯಕನ ವಿರುದ್ಧದ ಪ್ರಕರಣ ರದ್ದತಿ ಪ್ರಶ್ನಿಸಿ ಸುಪ್ರೀಂ ಮೆಟ್ಟಲೇರಿದ ರಾಜ್ಯ ಸರಕಾರ

Update: 2024-05-19 16:58 GMT

ಸುಪ್ರೀಂ ಕೋರ್ಟ್ | PC : PTI

ಹೊಸದಿಲ್ಲಿ : ಕಳೆದ ವರ್ಷ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭ ಮತಗಟ್ಟೆಯೊಂದರಲ್ಲಿ ಇಲೆಕ್ಟ್ರಾನಿಕ್ ಮತಯಂತ್ರಗಳಿಗೆ ಹಾನಿ ಮಾಡಿದ್ದ ಗುಂಪಿನಲ್ಲಿದ್ದ ಜೆಡಿಎಸ್ ನಾಯಕ ಬಿ.ಬಿ.ಪಾಟೀಲ್ ಅವರಿಗೆ ಸುಪ್ರೀಂಕೋರ್ಟ್ ಶನಿವಾರ ನೋಟಿಸ್ ಜಾರಿಗೊಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಅವರ ವಿರುದ್ಧ ದಾಖಲಿಸಲಾಗಿದ್ದ ಕ್ರಿಮಿನಲ್ ದೂರನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದ್ದನ್ನು ಪ್ರಶ್ನಿಸಿ ಕರ್ನಾಟಕ ಸರಕಾರ ಸಲ್ಲಿಸಿರುವ ಮೇಲ್ಮನವಿಗೆ ಉತ್ತರಿಸುವಂತೆ ತಿಳಿಸಿದೆ.

ನ್ಯಾಯಮೂರ್ತಿ ವಿಕ್ರಮ್ ನಾಥ್ ಹಾಗೂ ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠವು ಪಾಟೀಲ್ ಗೆ ನೋಟಿಸ್ ಜಾರಿಗೊಳಿಸಿದೆ. ಬೇಸಿಗೆ ರಜೆಯ ಆನಂತರ ಸರ್ವೋಚ್ಚ ನ್ಯಾಯಾಲಯವು ಪ್ರಕರಣದ ಆಲಿಕೆ ನಡೆಸಲಿದೆ.

ಜೆಡಿಎಸ್ ಪಕ್ಷದ ನಾಯಕರಾದ ಬಿ.ಬಿ.ಪಾಟೀಲ್ ನಿವೃತ್ತ ಪೊಲೀಸ್ ಅಧಿಕಾರಿ. ಕಳೆದ ವರ್ಷ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಇವಿಎಂಗಳಿಗೆ ಹಾನಿ ಮಾಡಿದ ಗುಂಪಿನಲ್ಲಿ ಶಾಮೀಲಾಗಿದ್ದ ಆರೋಪಕ್ಕೆ ಸಂಬಂಧಿಸಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು.

2023ರ ಜುಲೈನಲ್ಲಿ ರಾಜ್ಯ ಹೈಕೋರ್ಟ್ನ ಕಲಬುರಗಿ ಪೀಠವು ಪಾಟೀಲ್ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಿತ್ತು. ಬಳಿಕ ಕರ್ನಾಟಕ ಹೈಕೋರ್ಟ್ ಸುಪ್ರೀಂಕೋರ್ಟ್ ಮೆಟ್ಟಲೇರಿ ಹೈಕೋರ್ಟ್ ಆದೇಶವನ್ನು ರದ್ದುಪಡಿಸುವಂತೆ ಕೋರಿತ್ತು.

ಆರೋಪಿ ಬಿ.ಬಿ.ಪಾಟೀಲ್ ಅವರು ಚುನಾವಣೆ ನಿರ್ವಹಣಾಧಿಕಾರಿಗಳ ಮೇಲೆ ದಾಳಿ ನಡೆಸಿದ ಗುಂಪಿನ ನೇತೃತ್ವ ವಹಿಸಿದ್ದರು. ವಾಹನಗಳಿಗೆ ಹಾನಿ ಮಾಡುವಲ್ಲಿ, ಇವಿಎಂ ಸೇರಿದಂತೆ ಚುನಾವಣಾ ಸಲಕರಣೆಗಳನ್ನು ನಾಶಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರೆಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News