‘ಅಗ್ನಿಪಥ್’ ಯೋಜನೆ ರಾಷ್ಟ್ರೀಯ ಭದ್ರತೆಗೆ ಬೆದರಿಕೆ: ಕಾಂಗ್ರೆಸ್
ಹೊಸದಿಲ್ಲಿ, ಮೇ 28: ಅಗ್ನಿಪಥ್ ಸೇನಾ ನೇಮಕಾತಿ ಯೋಜನೆ ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಎಂದು ಕಾಂಗ್ರೆಸ್ ಮಂಗಳವಾರ ಹೇಳಿದೆ. ಇದು ನೇಮಕಾತಿ ಸಂಖ್ಯೆಯನ್ನು ಕಡಿತಗೊಳಿಸುತ್ತದೆ. ಇದರಿಂದ ಮುಂದಿನ ದಶಕದಲ್ಲಿ ದೇಶದ ಭದ್ರತೆಯೊಂದಿಗೆ ರಾಜಿ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಬಹುದು ಎಂದು ಅದು ಹೇಳಿದೆ.
ತನ್ನ ‘ಎಕ್ಸ್’ನ ಪೋಸ್ಟ್ ನಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಕಾಂಗ್ರೆಸ್ ನ ಹಿರಿಯ ನಾಯಕ ಜೈರಾಮ್ ರಮೇಶ್, ಚೀನಾ ಆಕ್ರಮಣಗಳಿಂದ ರಕ್ಷಿಸಲು ಪೂರ್ವ ಲಡಾಕ್ ನಲ್ಲಿ ಭಾರತೀಯ ಶಸಸ್ತ್ರ ಪಡೆಗಳನ್ನು ನಿರಂತರವಾಗಿ ನಿಯೋಜಿಸುವ ಅಗತ್ಯತೆ ಇದೆ ಎಂದರು.
‘‘ಅಗ್ನಿಪಥ್ ಯೋಜನೆ ನೇಮಕಾತಿ ಸಂಖ್ಯೆ ಪ್ರತಿವರ್ಷ 46 ಸಾವಿರದಿಂದ 75 ಸಾವಿರಕ್ಕೆ ಇಳಿಕೆಯಾಗುತ್ತಿದೆ. ಸಿಬ್ಬಂದಿ ಕೊರತೆಯ ಕಾರಣದಿಂದ ಮುಂದಿನ ದಶಕಗಳಲ್ಲಿ ನಮ್ಮ ಭದ್ರತೆಯೊಂದಿಗೆ ರಾಜಿ ಮಾಡಿಕೊಳ್ಳಬೇಕಾಗಬಹುದು’’ ಎಂದು ಅವರು ಹೇಳಿದರು.
ಶೂನ್ಯ ಮುಂದಾಲೋಚನೆ, ಶೂನ್ಯ ಸಮಾಲೋಚನೆ ಹಾಗೂ ಮೂರು ಪಡೆಗಳ ಮುಖ್ಯಸ್ಥರ ವಿರೋಧವನ್ನು ಕಡೆಗಣಿಸಿ ಮೋದಿ ಸರಕಾರ ಜಾರಿಗೆ ತಂದ ನೀತಿಯ ಫಲಿತಾಂಶ ಇದಾಗಿದೆ ಎಂದು ಜೈರಾಮ್ ರಮೇಶ್ ಅವರು ಹೇಳಿದರು.
ಅಗ್ನಿಪಥ್ ಯೋಜನೆಯನ್ನು ಜಾರಿಗೆ ತರುವ ಮೂಲಕ ಮೋದಿ ಸರಕಾರ ದೇಶದ ಭದ್ರತೆ ಹಾಗೂ ಯುವ ಜನರ ಭವಿಷ್ಯದೊಂದಿಗೆ ಆಟವಾಡುತ್ತಿದೆ ಎಂದು ಕಾಂಗ್ರೆಸ್ ಸೋಮವಾರ ಆರೋಪಿಸಿತ್ತು. ಕೇಂದ್ರದಲ್ಲಿ ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ, ಅಗ್ನಿಪಥ್ ಯೋಜನೆಯನ್ನು ರದ್ದುಗೊಳಿಸಲಾಗುವುದು ಎಂದು ಅದು ಹೇಳಿತ್ತು.