ಫೋಟೋ ತೆಗೆಯುವಾಗ ಅಡ್ಡ ಬಂದ ಕಾರ್ಯಕರ್ತನಿಗೆ ಕಾಲಿನಿಂದ ಒದ್ದ ಬಿಜೆಪಿ ನಾಯಕ; ವಿಡಿಯೋ ವೈರಲ್

Update: 2024-11-13 11:07 GMT

Screengrab: X

ಮುಂಬೈ: ಬಿಜೆಪಿ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ರಾವ್ ಸಾಹೇಬ್ ದಾನ್ವೆ ಪಕ್ಷದ ಕಾರ್ಯಕರ್ತರೊಬ್ಬರಿಗೆ ಕಾಲಿನಲ್ಲಿ ಒದೆಯುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಮಹಾರಾಷ್ಟ್ರ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ಘಟನೆಯ ವಿರುದ್ಧ ಪ್ರಮುಖ ವಿರೋಧ ಪಕ್ಷಗಳ ಮೈತ್ರಿಕೂಟವಾದ ಮಹಾವಿಕಾಸ್ ಅಘಾಡಿ, ಆಡಳಿತಾರೂಢ ಮಹಾಯುತಿ ಮೈತ್ರಿಕೂಟದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

ಏಕನಾಥ್ ಶಿಂದೆ ನೇತೃತ್ವದ ಶಿವಸೇನೆಯ ಜಲ್ನಾ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಅರ್ಜುನ್ ಖೋತ್ಕರ್‌ರೊಂದಿಗೆ ದಾನ್ವೆ ಫೋಟೋಗಾಗಿ ಭಂಗಿ ನೀಡುವಾಗ ಈ ಘಟನೆ ನಡೆದಿದೆ.

ವೈರಲ್ ಆಗಿರುವ ವಿಡಿಯೊದಲ್ಲಿ ದಾನ್ವೆ ಫೋಟೊಗೆ ಪೋಸ್ ನೀಡುವಾಗ, ಪಕ್ಷದ ಕಾರ್ಯಕರ್ತರೊಬ್ಬರು ಅವರ ಸಮೀಪಕ್ಕೆ ತೆರಳಿ, ಅವರ ಪಕ್ಕ ನಿಂತುಕೊಂಡಿದ್ದಾರೆ. ಅದಕ್ಕೆ ಪ್ರತಿಯಾಗಿ, ದೂರ ಸರಿಯುವಂತೆ ಆ ಕಾರ್ಯಕರ್ತನಿಗೆ ದಾನ್ವೆ ಬಲಗಾಲಿನಲ್ಲಿ ಒದೆಯುತ್ತಿರುವುದು ಸೆರೆಯಾಗಿದೆ.

ವಿಡಿಯೊದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿಯನ್ನು ಶೇಖ್ ಅಮದ್ ಎಂದು ಗುರುತಿಸಲಾಗಿದ್ದು, "ಇದೆಲ್ಲ ತಪ್ಪು ತಿಳಿವಳಿಕೆಯಿಂದ ಆಗಿದೆ. ನಾನು ದಾನ್ವೆಗೆ ಶರ್ಟ್ ಅನ್ನು ಸರಿಪಡಿಸಿಕೊಳ್ಳಿ ಎಂದು ಹೇಳಲಷ್ಟೆ ಅಲ್ಲಿದ್ದೆ. ದಾನ್ವೆಯು ನನಗೆ ಕಾಲಿನಲ್ಲಿ ಒದ್ದಿದ್ದು ಕೇವಲ ನಮ್ಮಿಬ್ಬರ ನಡುವಿನ ಗೆಳೆತನದ ಸಲುಗೆಯಿಂದಾಗಿತ್ತು" ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ಈ ವೈರಲ್ ವಿಡಿಯೊ ಕುರಿತು ಪ್ರತಿಕ್ರಿಯಿಸಿರುವ ಶಿವಸೇನೆ ನಾಯಕ ಆದಿತ್ಯ ಠಾಕ್ರೆ, ದಾನ್ವೆ ಫುಟ್‌ಬಾಲ್‌ ತಂಡದಲ್ಲಿರಬೇಕಿತ್ತು ಎಂದು ವ್ಯಂಗ್ಯವಾಡಿದ್ದಾರೆ. ಅಲ್ಲದೆ, ಬಿಜೆಪಿ ಕಾರ್ಯಕರ್ತರಿಗೆ ದೊರೆಯುತ್ತಿರುವ ಗೌರವದ ಕುರಿತು ಪ್ರಶ್ನೆ ಮಾಡಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಬಿಜೆಪಿ ಕಾರ್ಯಕರ್ತರು ಈ ಘಟನೆಯ ಹಿನ್ನೆಲೆಯಲ್ಲಿ ತಮ್ಮ ಪಕ್ಷದೆಡೆಗಿನ ನಿಷ್ಠೆಯನ್ನು ಮರು ಪರಿಗಣಿಸಬೇಕಿದೆ ಎಂದು ಅವರು ಕಿವಿಮಾತು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News