ನಿಫಾ ವೈರಸ್ | 7 ಗ್ರಾಮಗಳು ಕಂಟೈನ್ಮೆಂಟ್ ವಲಯವೆಂದು ಘೋಷಿಸಿದ ಕೇರಳ ಸರಕಾರ; ಶಾಲೆಗಳಿಗೆ ರಜೆ
ತಿರುವನಂತಪುರ: ನಿಫಾ ವೈರಸ್ ಸೋಂಕಿನಿಂದ ಇಬ್ಬರು ಮೃತಪಟ್ಟ ಬಳಿಕ ಕೋಝಿಕ್ಕೋಡಿನ 7 ಗ್ರಾಮಗಳನ್ನು ಕಂಟೈನ್ಮೆಂಟ್ ವಲಯ ಎಂದು ಕೇರಳ ಸರಕಾರ ಬುಧವಾರ ಘೋಷಿಸಿದೆ.
ಅಟಂಚೇರಿ, ಮರುತೊಂಕರಾ, ತಿರುವಳ್ಳೂರ್, ಕುಟ್ಟಿಯಾಡಿ, ಕಾಯಕ್ಕೋಡಿ, ವಿಲ್ಯಪಳ್ಳಿ ಹಾಗೂ ಕವಿಲುಂಪಾರ ಕಂಟೈನ್ಮೆಂಟ್ ವಲಯಗಳೆಂದು ಘೋಷಿಸಲಾದ ಗ್ರಾಮಗಳು ಎಂದು ಕೋಝಿಕ್ಕೋಡ್ ಎಂದು ಜಿಲ್ಲಾಧಿಕಾರಿ ಎ. ಗೀತಾ ಅವರು ಪೇಸ್ಬುಕ್ ಪೋಸ್ಟಿನಲ್ಲಿ ತಿಳಿಸಿದ್ದಾರೆ.
ಮುಂದಿನ ನೋಟಿಸು ನೀಡುವ ವರೆಗೆ ಈ ಕಂಟೈನ್ಮೆಂಟ್ ವಲಯದ ಒಳಗೆ ಹಾಗೂ ಹೊರಗೆ ಪ್ರಯಾಣಿಸಲು ಅವಕಾಶವಿಲ್ಲ. ಈ ಪ್ರದೇಶಗಳನ್ನು ಸುತ್ತುವರಿಯುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಅವರು ಮಂಗಳವಾರ ತಿಳಿಸಿದ್ದಾರೆ.
ಅಗತ್ಯದ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿ ಹಾಗೂ ವೈದ್ಯಕೀಯ ಪೂರೈಕೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಅಗತ್ಯದ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳಿಗೆ ಬೆಳಗ್ಗೆ 7ರಿಂದ ಸಂಜೆ 5 ಗಂಟೆ ವರೆಗೆ ಮಾತ್ರ ಕಾರ್ಯ ನಿರ್ವಹಿಸಲು ಅನುಮತಿ ನೀಡಲಾಗಿದೆ. ಔಷಧದ ಅಂಗಡಿ ಹಾಗೂ ಆರೋಗ್ಯ ಕೇಂದ್ರಗಳಿಗೆ ಸಮಯದ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ಅವರು ಹೇಳಿದ್ದಾರೆ.
ಸ್ಥಳಿಯಾಡಳಿತ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತ್ ಕಚೇರಿಗಳು ಕನಿಷ್ಠ ಸಿಬ್ಬಂದಿಯಿಂದ ಕಾರ್ಯ ನಿರ್ವಹಿಸಲಿವೆ. ಬ್ಯಾಂಕ್, ಇತರ ಸರಕಾರಿ ಅಥವಾ ಅರೆ ಸರಕಾರಿ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಅಂಗನವಾಡಿ ಕಾರ್ಯಾಚರಿಸುವಂತಿಲ್ಲ.
ಸಾರ್ವಜನಿಕರು ಆನ್ಲೈನ್ ಸೇವೆಯನ್ನು ಬಳಸಬೇಕು ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಭೇಟಿ ನೀಡಬಾರದು ಎಂದು ಅವರು ಹೇಳಿದ್ದಾರೆ. ಕಂಟೈನ್ಮೆಂಟ್ ವಲಯದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ಬಸ್ ಅಥವಾ ವಾಹನಗಳನ್ನು ನಿಲ್ಲಿಸುವಂತಿಲ್ಲ.
ಇದಕ್ಕೆ ಸಂಬಂಧಿಸಿದ ನಿರ್ದೇಶನಗಳನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಜಿಲ್ಲಾ ಸಾರಿಗೆ ಅಧಿಕಾರಿಗೆ ನೀಡಬೇಕು ಎಂದು ಅವರು ತಿಳಿಸಿದ್ದಾರೆ. ಎಲ್ಲರೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಹಾಗೂ ಕಂಟೈನ್ಮೆಂಟ್ ವಲಯದಲ್ಲಿ ಸ್ಯಾನಿಟೈಸರ್ ಬಳಸಬೇಕು ಎಂದು ಅವರು ಹೇಳಿದ್ದಾರೆ.
ರಾಜ್ಯಕ್ಕೆ ಎನ್ಐವಿ ತಂಡ ನಿಫಾ ವೈರಸ್ ಪರೀಕ್ಷೆ ನಡೆಸಲು ಹಾಗೂ ಬಾವಲಿಗಳ ಸಮೀಕ್ಷೆ ನಡೆಸುವುದಕ್ಕಾಗಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಮೊಬೈಲ್ ಪ್ರಯೋಗಾಲಯವನ್ನು ಆರಂಭಿಸಲು ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್ಐವಿ)ಯ ತಂಡ ರಾಜ್ಯಕ್ಕೆ ಆಗಮಿಸಿದೆ ಎಂದು ರಾಜ್ಯ ಸರಕಾರ ತಿಳಿಸಿದೆ.
ಕೇರಳದಲ್ಲಿ ಪತ್ತೆಯಾದ ನಿಫಾ ವೈರಸ್ ಬಾಂಗ್ಲಾದೇಶದ ಪ್ರಬೇಧ. ಇದು ಮಾನವನಿಂದ ಮಾನವನಿಗೆ ಹರಡುತ್ತದೆ. ಈ ವೈರಸ್ ಕಡಿಮೆ ಸಾಂಕ್ರಾಮಿಕವಾಗಿದ್ದರೂ ಅತ್ಯಧಿಕ ಮರಣಕ್ಕೆ ಕಾರಣವಾಗುತ್ತದೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.