ಒಡಿಶಾದ ಬಿಜೆಪಿ ಉಪಾಧ್ಯಕ್ಷೆ ಲೇಖಾಶ್ರೀ ಬಿಜೆಡಿಗೆ ಸೇರ್ಪಡೆ

Update: 2024-04-07 16:05 GMT

ಲೇಖಾಶ್ರೀ ಸಮಂತಾ ಸಿಂಗಾರ್

ಭುವನೇಶ್ವರ: ಒಡಿಶಾದಲ್ಲಿ ಪ್ರತಿಪಕ್ಷ ಬಿಜೆಪಿಗೆ ದೊಡ್ಡ ಹಿನ್ನಡೆಯುಂಟಾಗಿದ್ದು, ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷೆ ಲೇಖಾಶ್ರೀ ಸಮಂತಾ ಸಿಂಗಾರ್ ರಾಜೀನಾಮೆ ನೀಡಿ, ಆಡಳಿತಾರೂಢ ಬಿಜು ಜನತಾದಳ(ಬಿಜೆಡಿ) ಕ್ಕೆ ಸೇರ್ಪಡೆಗೊಂಡಿದ್ದಾರೆ.

ಒಡಿಶಾದಲ್ಲಿ ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಗೆ ಕೆಲವೇ ವಾರಗಳ ಮೊದಲು ಲೇಖಾಶ್ರೀ ಪಕ್ಷ ತೊರೆದಿರುವುದು ಬಿಜೆಪಿಗೆ ಭಾರೀ ಆಘಾತವುಂಟು ಮಾಡಿದೆ.

ಕೆಲವೇ ವಾರಗಳ ಹಿಂದೆ ಬಿಜೆಪಿಯ ಒಡಿಶಾ ಘಟಕದ ಇನ್ನೋರ್ವ ಉಪಾಧ್ಯಕ್ಷ ಭೃಗು ಬಕ್ಸಿಪಾತ್ರ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಪಕ್ಷದ ನಾಯಕತ್ವವು ಜನತೆಯ ವಿಶ್ವಾಸವನ್ನು ಗಳಿಸಲು ವಿಫಲವಾಗಿರುವುದರಿಂದ ಕೇಸರಿ ಪಕ್ಷವನ್ನು ತೊರೆಯಲು ತಾನು ನಿರ್ಧರಿಸಿರುವುದಾಗಿ ಆಕೆ ಹೇಳಿದ್ದಾರೆ.

‘‘ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿಗಾಗಿ ನಾನು ನನ್ನ ಬೆವರು ಹಾಗೂ ರಕ್ತವನ್ನು ಸುರಿಸಿದ್ದೇನೆ. ಈ ಎಲ್ಲಾ ಪ್ರಾಮಾಣಿಕತೆ ಹಾಗೂ ಕಠಿಣ ಪರಿಶ್ರಮದ ಹೊರತಾಗಿಯೂ ನನಗೆ ನಾಯಕತ್ವದ ವಿಶ್ವಾಸವನ್ನು ಗಳಿಸಲು ಸಾಧ್ಯವಾಗಿಲ್ಲ. ಹೀಗಾಗಿ ಒಡಿಶಾದ ಜನತೆಗೆ ಸೇವೆ ಸಲ್ಲಿಸುವ ನನ್ನ ಕನಸಿಗೆ ಭಂಗವುಂಟಾಗಿದೆ’’ ಎಂದು ಲೇಖಾಶ್ರೀ ಅವರು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ಲೇಖಾಶ್ರೀ ಅವರು ರವಿವಾರ ಸಂಸದರಾದ ಮಾನಸ್ ಮಾಂಗರಾಜ್ ಹಾಗೂ ಸಸ್ಮಿತ್ ಪಾತ್ರ ಅವರ ಉಪಸ್ಥಿತಿಯಲ್ಲಿ ಬಿಜೆಡಿಗೆ ಸೇರ್ಪಡೆಗೊಂಡರು.

ಬಾಲಸೋರ್ ಲೋಕಸಭಾ ಸ್ಥಾನಕ್ಕೆ ತನ್ನ ಅಭ್ಯರ್ಥಿಯ ಹೆಸರನ್ನು ಬಿಜೆಡಿ ಈವರೆಗೆ ಪ್ರಕಟಿಸದೆ ಇರುವುದರಿಂದ ಲೇಖಾಶ್ರೀ ಅವರು ಆ ಕ್ಷೇತ್ರದ ಟಿಕೆಟ್ ಪಡೆಯಲು ಯತ್ನಿಸುವ ಸಾಧ್ಯತೆಯಿದೆಯೆನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News