ಒಡಿಶಾ: 50 ಮಂದಿ ಪ್ರಯಾಣಿಕರಿದ್ದ ಬೋಟ್ ಮುಳುಗಡೆ; 7 ಮಂದಿ ಮೃತ್ಯು
ಝಾರ್ಸುಗುಡ (ಒಡಿಶಾ): 50 ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬೋಟ್ ಒಂದು ಮಹಾನದಿಯಲ್ಲಿ ಮುಳುಗಿ, ಕನಿಷ್ಠ ಪಕ್ಷ ಏಳು ಮಂದಿ ಮೃತಪಟ್ಟಿರುವ ಘಟನೆ ಶುಕ್ರವಾರ ಒಡಿಶಾದ ಝಾರ್ಸುಗುಡ ಜಿಲ್ಲೆಯಲ್ಲಿ ನಡೆದಿದೆ. ಮತ್ತೊಬ್ಬ ವ್ಯಕ್ತಿ ಇದುವರೆಗೂ ಪತ್ತೆಯಾಗಿಲ್ಲ.
ಬೋಟ್ ಬಾರ್ಗಢ್ ಜಿಲ್ಲೆಯ ಬಂಧಿಪಾಲಿ ಪ್ರದೇಶದಿಂದ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು. ಮಾರ್ಗ ಮಧ್ಯೆದ ಸುಳಿಗೆ ಸಿಲುಕಿದ್ದರಿಂದ ಝಾರ್ಸುಗುಡ ಜಿಲ್ಲೆಯ ಶಾರದಾ ಘಾಟ್ ಬಳಿ ಬೋಟ್ ಮಗುಚಿಕೊಂಡಿದೆ ಎಂದು ಹೇಳಲಾಗಿದೆ.
ಈ ನಡುವೆ, ಸಂತ್ರಸ್ತರ ಕುಟುಂಬಗಳಿಗೆ ತಲಾ ರೂ. 4 ಲಕ್ಷ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಘೋಷಿಸಿದ್ದಾರೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಸುರೇಶ್ ಪೂಜಾರಿ, “ಬೋಟ್ ಚಾಲಕನು ಪರವಾನಗಿ ಇಲ್ಲದೆ ಚಲಾಯಿಸುತ್ತಿದ್ದ” ಎಂದು ಆರೋಪಿಸಿದ್ದಾರೆ. ಅಲ್ಲದೆ ಬೋಟ್ ನಲ್ಲಿ ಸಾಮರ್ಥ್ಯವನ್ನೂ ಮೀರಿ ಪ್ರಯಾಣಿಕರನ್ನು ಕರೆದೊಯ್ಯಲಾಗುತ್ತಿತ್ತು ಎಂದೂ ಅವರು ದೂರಿದ್ದಾರೆ.
ಅಪಘಾತದ ಕುರಿತು ತನಿಖೆ ನಡೆಸಲಾಗುವುದು ಎಂದು ಜಿಲ್ಲಾಡಳಿತವು ಹೇಳಿದೆ.