ಸ್ಪಷ್ಟ ಕೈಬರಹಗಳಲ್ಲಿ ಮರಣೋತ್ತರ ಪರೀಕ್ಷಾ ವರದಿ, ಔಷಧಿ ಚೀಟಿ ನೀಡಬೇಕು : ವೈದ್ಯರುಗಳಿಗೆ ಓಡಿಶಾ ಸರಕಾರ ಸೂಚನೆ
ಭುವನೇಶ್ವರ : ಮರಣೋತ್ತರ ಪರೀಕ್ಷಾ ವರದಿಗಳನ್ನು ಹಾಗೂ ಔಷಧಿ ಚೀಟಿ (ಪ್ರಿಸ್ಕ್ರಿಪ್ಶನ್)ಗಳನ್ನು ಆಂಗ್ಲಭಾಷೆಯ ದೊಡ್ಡ ಅಕ್ಷರ (ಕ್ಯಾಪಿಟಲ್ ಲೆಟರ್)ಗಲ್ಲಿ ಅಥವಾ ಸುಲಭವಾಗಿ ಓದಲು ಸಾಧ್ಯವಾಗುವಂತೆ ಸ್ಫುಟವಾದ ಕೈಬರಹದಲ್ಲಿ ಅಥವಾ ಟೈಪಿಂಗ್ ರೂಪದಲ್ಲಿ ಬರೆಯಬೇಕೆಂದು ಓಡಿಶಾ ಸರಕಾರವು ವೈದ್ಯರುಗಳಿಗೆ ತಿಳಿಸಿದೆ.
ಹಾವು ಕಡಿತದ ಪ್ರಕರಣವೊಂದರಲ್ಲಿ ಮರಣೋತ್ತರ ಪರೀಕ್ಷೆಯ ವರದಿಯನ್ನು ಸ್ಫುಟವಾಗಿ ಬರೆಯದಿರುವುದನ್ನು ಗಮನಿಸಿದ ಒಡಿಶಾ ಹೈಕೋರ್ಟ್ ನ ನ್ಯಾಯಾಧೀಶ ಎಸ್.ಕೆ ಪಾಣಿಗ್ರಹಿ ಅವರು ಜನವರಿ 4ರಂದು ಈ ಬಗ್ಗೆ ಆದೇಶವೊಂದನ್ನು ಹೊರಡಿಸಿ, ವಿವರಣೆ ಕೋರಿ ಸಂಬಂಧಪಟ್ಟ ವೈದ್ಯರಿಗೆ ಸಮನ್ಸ್ ಜಾರಿಗೊಳಿಸಿದ್ದರು.
ಹಾವು ಕಡಿತದಿಂದಾಗಿ ಮೃತಪಟ್ಟ ವ್ಯಕ್ತಿಗೆ ಪರಿಹಾರಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು, ಈ ಪ್ರಕರಣದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ವರದಿಯನ್ನು ಓದಲು ಸಾಧ್ಯವಾಗದ ರೀತಿಯಲ್ಲಿ ಬರೆದಿರುವುದಾಗಿ ಅಭಿಪ್ರಾಯಪಟ್ಟಿದ್ದರು. ಸ್ವತಃ ವರದಿಯನ್ನು ಬರೆದಿರುವವರು ಅಥವಾ ಕೈಬರಹ ತಜ್ಞರಿಗೆ ಮಾತ್ರವೇ ಅದನ್ನು ಓದಲು ಸಾಧ್ಯವೆಂದು ಅವರು ಹೇಳಿದ್ದರು.