ಒಲಿಂಪಿಕ್ಸ್‌ನಲ್ಲಿ ಪ್ರಧಾನಿಯ ಕರೆಯನ್ನು ನಿರಾಕರಿಸಿದೆ : ವಿನೇಶ್ ಫೋಗಟ್

Update: 2024-10-02 15:34 GMT

 ವಿನೇಶ್ ಫೋಗಟ್ , ನರೇಂದ್ರ ಮೋದಿ | PTI

ಹೊಸದಿಲ್ಲಿ : ಇತ್ತೀಚೆಗೆ ನಡೆದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ, ಕುಸ್ತಿ ಸ್ಪರ್ಧೆಯ 50 ಕೆಜಿ ವಿಭಾಗದ ಫೈನಲ್‌ನಲ್ಲಿ ಸ್ಪರ್ಧಿಸುವುದರಿಂದ ಅನರ್ಹಗೊಂಡ ಬಳಿಕ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಲು ನಾನು ನಿರಾಕರಿಸಿದ್ದೆ ಎಂದು ಕುಸ್ತಿಪಟು ವಿನೇಶ್ ಫೋಗಟ್ ಹೇಳಿದ್ದಾರೆ.

ನನ್ನ ಭಾವನೆಗಳು ಮತ್ತು ಪ್ರಯತ್ನಗಳು ರಾಜಕೀಯ ಉದ್ದೇಶಗಳಿಗಾಗಿ ದುರುಪಯೋಗಗೊಳ್ಳುವುದನ್ನು ನಾನು ಬಯಸಲಿಲ್ಲ, ಹಾಗಾಗಿ ಅವರ ಫೋನ್ ಕರೆಯನ್ನು ತಿರಸ್ಕರಿಸಿದೆ ಎಂದು ಮಾಜಿ ಕುಸ್ತಿಪಟು ತಿಳಿಸಿದರು.

ಒಲಿಂಪಿಕ್ಸ್ ಹಿನ್ನಡೆಯ ಬಳಿಕ, ಫೋಗಟ್ ಸ್ಪರ್ಧಾತ್ಮಕ ಕುಸ್ತಿಗೆ ನಿವೃತ್ತಿ ಘೋಷಿಸಿದ್ದಾರೆ. ಅವರು ಈಗ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಜುಲಾನ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ.

‘‘ಪ್ರಧಾನಿಯಿಂದ ಫೋನ್ ಕರೆ ಬಂದಿತ್ತು. ಆದರೆ ನಾನು ಮಾತನಾಡಲು ನಿರಾಕರಿಸಿದೆ. ಅವರ ಕರೆ ನನಗೆ ನೇರವಾಗಿ ಬರಲಿಲ್ಲ. ಪ್ರಧಾನಿ ನಿಮ್ಮೊಂದಿಗೆ ಮಾತನಾಡಲು ಬಯಸಿದ್ದಾರೆ ಎಂದು ಅಲ್ಲಿದ್ದ ಭಾರತೀಯ ಅಧಿಕಾರಿಗಳು ನನಗೆ ತಿಳಿಸಿದರು. ನಾನು ಮಾತನಾಡಲು ಸಿದ್ಧಳಾದೆ. ಆದರೆ, ಆಗ ಅವರು ಶರತ್ತುಗಳನ್ನು ವಿಧಿಸಿದರು. ನನ್ನ ತಂಡದ ಯಾವುದೇ ಸದಸ್ಯರು ಅಲ್ಲಿ ಇರುವಂತಿಲ್ಲ ಮತ್ತು ಇಬ್ಬರು ಅಧಿಕಾರಿಗಳು ಆ ಕರೆಯನ್ನು ಚಿತ್ರೀಕರಿಸಿ ಸಾಮಾಜಿದ ಮಾಧ್ಯಮಗಳಲ್ಲಿ ಹಾಕುತ್ತಾರೆ ಎಂದು ಅವರು ಹೇಳಿದರು’’ ಎಂದು ‘the lallantopʼಗೆ ನೀಡಿದ ಸಂದರ್ಶನದಲ್ಲಿ ಫೋಗಟ್ ಹೇಳಿದರು.

‘‘ನನ್ನ ಭಾವನೆಗಳು ಮತ್ತು ಕಠಿಣ ಪರಿಶ್ರಮವು ಸಾಮಾಜಿಕ ಮಾಧ್ಯಮಗಳಲ್ಲಿ ಹಾಸ್ಯದ ವಸ್ತುವಾಗುವುದನ್ನು ನಾನು ಬಯಸಲಿಲ್ಲ’’ ಎಂದು ಅವರು ನುಡಿದರು.

► ಪ್ರಾಮಾಣಿಕ ಕರೆಯಾಗಿದ್ದರೆ ಮಾತನಾಡುತ್ತಿದ್ದೆ

ಪ್ರಧಾನಿಯ ಫೋನ್ ಕರೆಯು, ಸಂಭಾಷಣೆಯನ್ನು ಪ್ರಚಾರಕ್ಕೆ ಬಳಸಿಕೊಳ್ಳುವ ಶರತ್ತು ಇಲ್ಲದ ಪ್ರಾಮಾಣಿಕ ಕರೆಯಾಗಿದ್ದರೆ ನಾನು ಸ್ವೀಕರಿಸುತ್ತಿದ್ದೆ ಎಂದು ಅವರು ನುಡಿದರು.

‘‘ಅವರಿಗೆ ನಿಜವಾಗಿಯೂ ಅತ್ಲೀಟ್‌ಗಳ ಬಗ್ಗೆ ಕಾಳಜಿಯಿದ್ದರೆ, ಕರೆಗಳನ್ನು ದಾಖಲಿಸಿಕೊಳ್ಳದೆ ಮಾತನಾಡಬಹುದಾಗಿತ್ತು. ಆಗ ನಾನು ಅವರಿಗೆ ಕೃತಜ್ಞಳಾಗಿರುತ್ತಿದ್ದೆ’’ ಎಂದರು. ಪರಿಸ್ಥಿತಿಯ ಲಾಭ ಪಡೆಯುವುದಕ್ಕಾಗಿ ಪ್ರಧಾನಿ ಕಚೇರಿಯು ಶರತ್ತುಗಳನ್ನು ವಿಧಿಸಿರಬಹುದು ಎನ್ನುವುದು ನನ್ನ ಭಾವನೆಯಾಗಿದೆ ಎಂದು ಅವರು ಹೇಳಿದರು.

‘‘ತಾನು ವಿನೇಶ್ ಜೊತೆ ಮಾತನಾಡಿದರೆ ಅವರು ಕಳೆದ ಎರಡು ವರ್ಷಗಳ ಘಟನೆಗಳ ಬಗ್ಗೆ ಪ್ರಶ್ನಿಸಬಹುದು ಎನ್ನುವುದು ಅವರಿಗೆ (ಪ್ರಧಾನಿಗೆ) ಬಹುಷಃ ತಿಳಿದಿತ್ತು. ಬಹುಷಃ ಅದಕ್ಕಾಗಿಯೇ ನನ್ನ ಕಡೆಯಿಂದ ಯಾರೂ ರೆಕಾರ್ಡ್ ಮಾಡಬಾರದು ಎನ್ನುವ ಸೂಚನೆಯನ್ನು ನನಗೆ ನೀಡಲಾಗಿತ್ತು. ಯಾಕೆಂದರೆ, ಅವರು ತಮ್ಮ ವೀಡಿಯೊಗಳನ್ನು ತಿರುಚಬಹುದು, ಆದರೆ ನಾನು ಎಡಿಟ್ ಮಾಡುವುದಿಲ್ಲ. ನಾನು ಮೂಲ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕುತ್ತೇನೆ. ಹಾಗಾಗಿ, ಅವರು ಅದಕ್ಕೆ ಅವಕಾಶ ನಿರಾಕರಿಸಿದ್ದಾರೆ’’ ಎಂದು ಮಾಜಿ ಕುಸ್ತಿಪಟು ಹೇಳಿದರು.

ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ಮಹಿಳಾ ಕುಸ್ತಿಪಟುಗಳಿಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಮತ್ತು ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಭಜರಂಗ ಪೂನಿಯ ನೇತೃತ್ವದಲ್ಲಿ ಕುಸ್ತಿಪಟುಗಳು ಸುಮಾರು ಎರಡು ವರ್ಷಗಳ ಕಾಲ ಧರಣಿ ಸೇರಿದಂತೆ ನಿರಂತರ ಹೋರಾಟ ನಡೆಸಿರುವುದನ್ನು ಸ್ಮರಿಸಬಹುದಾಗಿದೆ.

ಪ್ಯಾರಿಸ್ ಒಲಿಂಪಿಕ್ಸ್ ಫೈನಲ್‌ಗೆ ಮುನ್ನ ಅವರ ತೂಕವು ನಿಗದಿತ ಮಿತಿಗಿಂತ ಕೇವಲ 100 ಗ್ರಾಮ್ ಹೆಚ್ಚಾದ ಹಿನ್ನೆಲೆಯಲ್ಲಿ ಅವರನ್ನು ಒಲಿಂಪಿಕ್ಸ್‌ನಿಂದ ಅನರ್ಹಗೊಳಿಸಲಾಗಿತ್ತು. ಅವರು ಮುನ್ನಾ ದಿನ ಸುಲಲಿತವಾಗಿ ಫೈನಲ್ ತಲುಪಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News