‘ಒಂದು ದೇಶ, ಒಂದು ಚುನಾವಣೆ’; ಕೇಂದ್ರದ 8 ಸದಸ್ಯರ ಸಮಿತಿಯಲ್ಲಿ ಅಮಿತ್ ಶಾ, ಅಧೀರ್ ರಂಜನ್ ಚೌಧುರಿ, ಅಝಾದ್
Update: 2023-09-02 16:51 GMT
ಹೊಸದಿಲ್ಲಿ: ಕೇಂದ್ರ ಹಾಗೂ ರಾಜ್ಯಗಳಲ್ಲಿ ಏಕ ಕಾಲದಲ್ಲಿ ಚುನಾವಣೆ ನಡೆಸುವ ‘ಒಂದು ದೇಶ, ಒಂದು ಚುನಾವಣೆ’ ಪ್ರಸ್ತಾವವನ್ನು ಪರಿಶೀಲಿಸಲು 8 ಸದಸ್ಯರ ಸಮಿತಿಯನ್ನು ಕೇಂದ್ರ ಸರಕಾರ ಶನಿವಾರ ಘೋಷಿಸಿದೆ. ಈ ಸಮಿತಿಗೆ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಈಗ ಈ ಸಮಿತಿಯಲ್ಲಿ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧುರಿ, ರಾಜ್ಯ ಸಭೆಯ ಪ್ರತಿಪಕ್ಷದ ನಾಯಕ ಗುಲಾಂ ನಬಿ ಆಝಾದ್ ಅವರನ್ನು ಸೇರಿಸಲಾಗಿದೆ.
ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಸುಭಾಷ್ ಸಿ. ಕಶ್ಯಪ್ ಹಾಗೂ ಹಿರಿಯ ನ್ಯಾಯವಾದಿ ಹರೀಶ್ ಸಾಳ್ವೆ ಅವರು ಕೂಡ ಸಮಿತಿಯಲ್ಲಿದ್ದಾರೆ. ಕಾನೂನು ಸಚಿವ ಅರ್ಜುನ್ ರಾಮ್ ಪಾಲ್ ಮೇಘವಾಲ್ ಅವರನ್ನು ವಿಶೇಷ ಆಹ್ವಾನಿತರಾಗಿ ಸೇರಿಸಲಾಗಿದೆ.