ಸಂಸತ್ ಭದ್ರತೆ ಉಲ್ಲಂಘನೆ ಪ್ರಕರಣ: ಇನ್ನೂ ಇಬ್ಬರು ಶಂಕಿತರು ಪೊಲೀಸ್ ವಶಕ್ಕೆ; ಆರು ತನಿಖಾ ತಂಡಗಳ ರಚನೆ
ಹೊಸದಿಲ್ಲಿ : ಸಂಸತ್ ಭದ್ರತೆ ಉಲ್ಲಂಘನೆಯ ರೂವಾರಿ ಲಲಿತ್ ಝಾ ಬಂಧನದ ಬೆನ್ನಲ್ಲೇ ಘಟನೆಗೆ ಸಂಬಂಧಿಸಿದಂತೆ ಇನ್ನೂ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ದಿಲ್ಲಿ ಪೋಲಿಸರು ಶುಕ್ರವಾರ ತಿಳಿಸಿದ್ದಾರೆ.
ರಾಜಸ್ಥಾನ ನಿವಾಸಿಗಳಾದ ಮಹೇಶ್ ಮತ್ತು ಕೈಲಾಷ ಅವರನ್ನು ಗುರುವಾರ ತಡರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಪೋಲಿಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಅವರಿಬ್ಬರೂ ಸಂಚನ್ನು ಕಾರ್ಯಗತಗೊಳಿಸಲು ಝಾಗೆ ನೆರವಾಗಿದ್ದರು ಮತ್ತು ‘ಜಸ್ಟೀಸ್ ಫಾರ್ ಆಝಾದ್ ಭಗತ್ ಸಿಂಗ್’ ಫೇಸಬುಕ್ ಗುಂಪಿನ ಸದಸ್ಯರಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದರು.
ಮಹೇಶ್ ತಂಡದ ಭಾಗವಾಗಲು ಯೋಜಿಸಿದ್ದ. ಆದರೆ ಆತನ ಸಂಬಂಧಿಗಳು ತಡೆದಿದ್ದರು. ಮಹೇಶ್ ದಿಲ್ಲಿಯಿಂದ ರಾಜಸ್ಥಾನದ ಕುಚಾಮನ್ ತಲುಪಿದ ಬಳಿಕ ಎಲ್ಲ ಆರೋಪಿಗಳ ಮೊಬೈಲ್ ಫೋನ್ ಗಳನ್ನು ಸುಟ್ಟು ಹಾಕಲು ಝಾಗೆ ನೆರವಾಗಿದ್ದ ಎಂದು ವರದಿಯು ತಿಳಿಸಿದೆ.
ಈವರೆಗೆ ಬಂಧಿಸಲ್ಪಟ್ಟಿರುವ ಅಥವಾ ವಿಚಾರಣೆಗೊಳಪಟ್ಟಿರುವ ಎಂಟು ಜನರಲ್ಲದೆ, ಈಗ ಅಳಿಸಲಾಗಿರುವ ಫೇಸ್ಬುಕ್ ಗ್ರೂಪ್ ನ ಭಾಗವಾಗಿದ್ದ ಇತರ ಕೆಲವರೂ ಪೋಲಿಸ್ ನಿಗಾದಲ್ಲಿದ್ದು, ಗ್ರೂಪ್ ಸದಸ್ಯರ ಪಟ್ಟಿಯನ್ನು ಭೇದಿಸಲು ಪೋಲಿಸರು ಪ್ರಯತ್ನಿಸುತ್ತಿದ್ದಾರೆ.
ಗುರುವಾರ ರಾತ್ರಿ ದಿಲ್ಲಿಯ ಪೋಲೀಸ್ ಠಾಣೆಯಲ್ಲಿ ಶರಣಾದ ಝಾನನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಪೋಲಿಸ್ ಮೂಲಗಳು ತಿಳಿಸಿದವು. ಸಂಸತ್ತಿನ ಭದ್ರತೆ ಉಲ್ಲಂಘನೆಯಲ್ಲಿ ಝಾಗೆ ಯಾವುದೇ ವ್ಯಕ್ತಿ ಅಥವಾ ಸಂಘಟನೆಯಿಂದ ಸೂಚನೆ ಅಥವಾ ಮಾರ್ಗದರ್ಶನ ಲಭಿಸಿತ್ತೇ ಎಂಬ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಈ ನಡುವೆ ಪ.ಬಂಗಾಳದ ಬರಾಕಪೋರ್ ಪೊಲೀಸರ ತಂಡವೊಂದು ಝಾನ ಸ್ನೇಹಿತ ನೀಲಕಹ್ಯ ಐಚ್ ನಿವಾಸಕ್ಕೆ ಗುರುವಾರ ಭೇಟಿ ನೀಡಿ ಝಾ ಜೊತೆ ಒಡನಾಟದ ಕುರಿತು ಪ್ರಶ್ನಿಸಿದೆ. ಅವರಿಬ್ಬರೂ ಎನ್ ಜಿ ಒ ಒಂದರಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು.
ಕಾಲೇಜು ವಿದ್ಯಾರ್ಥಿಯಾಗಿರುವ ಐಚ್ ಸಂಸತ್ ಘಟನೆಯ ಬೆನ್ನಿಗೇ ಝಾನಿಂದ ಭದ್ರತಾ ಉಲ್ಲಂಘನೆಯ ವಿಡಿಯೊವನ್ನು ಸ್ವೀಕರಿಸಿದ್ದ. ಆತನ ಮೊಬೈಲ್ ಪರಿಶೀಲಿಸಿ ಕೆಲವು ಮಾಹಿತಿಗಳನ್ನು ಪಡೆದುಕೊಂಡಿದ್ದು, ತನಿಖೆಯಲ್ಲಿ ಇವು ಪ್ರಮುಖವಾಗಬಹುದು ಎಂದು ಬರಾಕಪೋರ್ ಪೋಲಿಸರು ತಿಳಿಸಿದರು.
ತನಿಖೆಯ ಅಂಗವಾಗಿ ಪೋಲಿಸ್ ಕಸ್ಟಡಿಯಲ್ಲಿರುವ ನಾಲ್ವರು ಆರೋಪಿಗಳನ್ನು ಅವರ ಊರುಗಳಿಗೆ ಮತ್ತು ಸಂಚು ರೂಪಿಸಲು ಪರಸ್ಪರ ಭೇಟಿಯಾಗಿದ್ದ ಸ್ಥಳಗಳಿಗೆ ಕರೆದೊಯ್ಯಲಾಗುವುದು. ಇದಕ್ಕಾಗಿ ದಿಲ್ಲಿ ಪೋಲಿಸರು ಆರು ತಂಡಗಳನ್ನು ರಚಿಸಿದ್ದಾರೆ. ದಿಲ್ಲಿ ಪೊಲೀಸರ ವಿಶೇಷ ಘಟಕವು ಶನಿವಾರ ಅಥವಾ ರವಿವಾರ ಆರೋಪಿಗಳನ್ನು ಸಂಸತ್ ಸಂಕೀರ್ಣಕ್ಕೆ ಕರೆದೊಯ್ದು ಬುಧವಾರದ ಸಂಸತ್ ಭದ್ರತೆ ಉಲ್ಲಂಘನೆಯ ದೃಶ್ಯವನ್ನು ಮರು ಸೃಷ್ಟಿಸಲಿದೆ ಎಂದು ಪೋಲಿಸರು ತಿಳಿಸಿದರು.