ಸಂಸತ್ತು ಮೊದಲು ನೀಟ್ ಹಗರಣದ ಕುರಿತು ಚರ್ಚಿಸಬೇಕು: ವಿಪಕ್ಷ ನಾಯಕ ರಾಹುಲ್ ಗಾಂಧಿ

Update: 2024-06-28 07:05 GMT

ರಾಹುಲ್ ಗಾಂಧಿ (Photo: PTI)

ಹೊಸದಿಲ್ಲಿ: ದೇಶದ ಯುವಕರ ಭವಿಷ್ಯಕ್ಕೆ ಸಂಬಂಧಿಸಿರುವ ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳ ಕುರಿತು ಸಂಸತ್ತಿನಲ್ಲಿ ಗೌರವಯುತ ಹಾಗೂ ಉತ್ತಮ ಚರ್ಚೆ ನಡೆಸುವಂತೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಗೆ ಲೋಕಸಭೆಯಲ್ಲಿನ ವಿಪಕ್ಷ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

ನೀಟ್ ಈ ಹೊತ್ತಿನ ಬಹು ಮುಖ್ಯ ವಿಷಯವಾಗಿದ್ದು, ಬೇರೆಲ್ಲ ವಿಷಯಗಳಿಗಿಂತ ಮೊದಲು ಈ ವಿಷಯವನ್ನು ಅಧಿವೇಶನದ ಕಲಾಪದಲ್ಲಿ ಮೊದಲಿಗೇ ತೆಗೆದುಕೊಳ್ಳಬೇಕು ಎಂಬ ಕುರಿತು ಎಲ್ಲ ವಿರೋಧ ಪಕ್ಷಗಳೂ ಒಮ್ಮತಕ್ಕೆ ಬಂದಿವೆ ಎಂದು ಸಂಸತ್ತಿನ ಸಂಕೀರ್ಣದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಅವರು ಹೇಳಿದ್ದಾರೆ.

"ಈ ವಿಷಯವು ದೇಶದ ಯುವಕರಿಗೆ ಸಂಬಂಧಿಸಿದ್ದು, ಈ ವಿಷಯವು ಅತ್ಯಂತ ಪ್ರಮುಖ ವಿಷಯ ಎಂದು ಇಂಡಿಯಾ ಮೈತ್ರಿಕೂಟವು ಭಾವಿಸಿದೆ" ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

"ವಿದ್ಯಾರ್ಥಿಗಳ ಸಮಸ್ಯೆಯ ಕುರಿತು ಧ್ವನಿ ಎತ್ತುವಲ್ಲಿ ಸರಕಾರ ಮತ್ತು ವಿರೋಧ ಪಕ್ಷಗಳೆರಡೂ ಒಗ್ಗಟ್ಟಾಗಿವೆ ಎಂಬ ಸಂದೇಶವನ್ನು ದೇಶದ ಯುವಕರಿಗೆ ಸಂಸತ್ತು ರವಾನಿಸಬೇಕಿದೆ. ಈ ವಿಷಯವು ದೇಶದ ಯುವಕರಿಗೆ ಸಂಬಂಧಿಸಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಈ ಕುರಿತು ಸಂಸತ್ತಿನಲ್ಲಿ ಗೌರವಯುತ ಮತ್ತು ಉತ್ತಮ ಚರ್ಚೆಯನ್ನು ನಡೆಸಬೇಕು ಎಂದು ಆಗ್ರಹಿಸುತ್ತೇನೆ" ಎಂದು ಅವರು ತಿಳಿಸಿದ್ದಾರೆ.

ಜೂನ್ 4ರಂದು ಪ್ರಕಟವಾಗಿದ್ದ ನೀಟ್ ಪರೀಕ್ಷಾ ಫಲಿತಾಂಶದಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ, ಕೇಂದ್ರ ಸರಕಾರ ಈ ಕುರಿತ ತನಿಖೆಯನ್ನು ಸಿಬಿಐಗೆ ವಹಿಸಿದೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಸಂಬಂಧ ಬಿಹಾರ ಪೊಲೀಸರು ಈಗಾಗಲೇ ಕೆಲವರನ್ನು ಬಂಧಿಸಿ, ವಿಚಾರಣೆಗೊಳಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News