ದಿಲ್ಲಿ ಪ್ರವಾಹ: ರಸ್ತೆಗೆ ನುಗ್ಗಿದ ನೀರಿನಲ್ಲಿ ವಿದ್ಯುತ್ ಹರಿದು ಹಲವು ನಾಗರಿಕರಿಗೆ ವಿದ್ಯುದಾಘಾತ
ಹೊಸದಿಲ್ಲಿ: ಯಮುನಾ ನದಿ ಉಕ್ಕೇರಿ ರಸ್ತೆಗಳಿಗೆ ಹರಿದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಮನೆಗಳು, ಮಳಿಗೆಗಳು ಹಾಗೂ ಕಾರುಗಳು ಮುಳುಗಿ, ದಿಲ್ಲಿ ನಿವಾಸಿಗಳು ಅದರಿಂದ ಪಾರಾಗಲು ಹರಸಾಹಸ ಪಡುತ್ತಿದ್ದಾರೆ. ಈ ಸಂಕಷ್ಟದ ನಡುವೆಯೇ, ರಸ್ತೆಯಲ್ಲಿ ಹರಿಯುತ್ತಿರುವ ನೀರಿನಲ್ಲಿ ವಿದ್ಯುತ್ ಕಂಬಗಳಿಂದ ವಿದ್ಯುತ್ ಪ್ರವಹಿಸುತ್ತಿದ್ದು, ದಿಲ್ಲಿ ನಿವಾಸಿಗಳ ಗೋಳು ಮತ್ತಷ್ಟು ಹೆಚ್ಚಾಗಿದೆ. ಯಮುನಾ ನದಿಯ ಬದಿ ರಸ್ತೆಯಲ್ಲಿ ಓಡಾಡಬೇಕಾದ ಅನಿವಾರ್ಯಕ್ಕೆ ಈಡಾಗಿರುವ ದಿಲ್ಲಿ ನಾಗರಿಕರು ದಿಲ್ಲಿಯ ಐಟಿಒ ಬಳಿ ಬರಿಗಾಲಲ್ಲಿ ನಡೆಯುವಾಗ ವಿದ್ಯುತ್ ಕಂಬಗಳಿಂದ ವಿದ್ಯುದಾಘಾತ ಅನುಭವಿಸುತ್ತಿದ್ದಾರೆ ಎಂದು ndtv.com ವರದಿ ಮಾಡಿದೆ.
ಶುಕ್ರವಾರ ಮುಂಜಾನೆ ಐಟಿಒ ಬದಿ ರಸ್ತೆಯನ್ನು ದಾಟಲು ಹಲವು ಜನರು ಸರತಿಯಲ್ಲಿ ನಿಂತಿದ್ದಾಗ ಅಲ್ಲಿರುವ ಕೆಲವು ವಿದ್ಯುತ್ ಕಂಬಗಳಿಂದ ವಿದ್ಯುತ್ ಪ್ರವಹಿಸುತ್ತಿದ್ದರಿಂದ ವಿದ್ಯುದಾಘಾತ ಅನುಭವಿಸುತ್ತಿರುವ ದೃಶ್ಯಗಳು ಸೆರೆಯಾಗಿವೆ.
ಸುದ್ದಿ ತಿಳಿದ ನಂತರ ಸಂಬಂಧಿತ ಪ್ರಾಧಿಕಾರಗಳು ಈ ವಿದ್ಯುತ್ ಕಂಬಗಳಿಗೆ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಿವೆ.
ಇದಕ್ಕೂ ಮುನ್ನ, ಕಳೆದ ತಿಂಗಳು ಹೊಸದಿಲ್ಲಿ ರೈಲ್ವೆ ನಿಲ್ದಾಣದ ಬಳಿ ತನ್ನ ಮಕ್ಕಳ ಎದುರೇ 34 ವರ್ಷದ ಮಹಿಳೆಯೊಬ್ಬಳು ವಿದ್ಯುದಾಘಾತದಿಂದ ಮೃತಪಟ್ಟಿದ್ದರು. ನಗರದ ಮತ್ತೊಂದು ಭಾಗದಲ್ಲಿ ವಿದ್ಯುತ್ ಪ್ರವಹಿಸುತ್ತಿರುವ ತಂತಿ ಬಿದ್ದಿದ್ದ ನಿಂತಿರುವ ನೀರಿನಲ್ಲಿ ಹಾದು ಹೋಗಲು ಪ್ರಯತ್ನಿಸಿದ್ದ 17 ವರ್ಷದ ಬಾಲಕನೊಬ್ಬ ವಿದ್ಯುದಾಘಾತಕ್ಕೆ ಬಲಿಯಾಗಿದ್ದ.