ಜನರಿಗೆ ಕಾನೂನುಗಳ ಬಗ್ಗೆ ಭಯವೂ ಇಲ್ಲ, ಗೌರವವೂ ಇಲ್ಲ : ರಸ್ತೆ ಅಪಘಾತಗಳ ಕುರಿತು ನಿತಿನ್ ಗಡ್ಕರಿ ಹೇಳಿಕೆ

Update: 2024-12-05 14:30 GMT

ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ | PC : PTI 

ಹೊಸದಿಲ್ಲಿ: ರಸ್ತೆ ಅಪಘಾತಗಳಲ್ಲಿನ ಮರಣ ಪ್ರಮಾಣವನ್ನು ತಗ್ಗಿಸಲು ಕೇಂದ್ರ ಸರಕಾರ ನಿರಂತರ ಪ್ರಯತ್ನ ನಡೆಸುತ್ತಿದ್ದರೂ, ಜನರಿಗೆ ಕಾನೂನುಗಳ ಬಗ್ಗೆ ಗೌರವವಾಗಲಿ ಅಥವಾ ಭಯವಾಗಲಿ ಇಲ್ಲದೆ ಇರುವುದರಿಂದ, ಗಾಯಾಳುಗಳ ಪ್ರಮಾಣ ಏರುಗತಿಯಲ್ಲೇ ಇದೆ ಎಂದು ಗುರುವಾರ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅಸಮಾಧಾನ ವ್ಯಕ್ತಪಡಿಸಿದರು.

ಲೋಕಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಪಾಲ್ಗೊಂಡು ಮಾತನಾಡಿದ ನಿತಿನ್ ಗಡ್ಕರಿ, ನಾನೂ ಕೂಡಾ ರಸ್ತೆ ಅಪಘಾತದ ಸಂತ್ರಸ್ತನಾಗಿದ್ದು, ಈ ವಿಷಯದ ಕುರಿತು ಸೂಕ್ಷ್ಮವಾಗಿದ್ದೇನೆ ಎಂದು ಹೇಳಿದರು.

ರಸ್ತೆ ಎಂಜಿನಿಯರಿಂಗ್, ಆಟೊಮೊಬೈಲ್ ಎಂಜಿನಿಯರಿಂಗ್, ಕಾನೂನು ಜಾರಿ ಹಾಗೂ ಜನರಿಗೆ ಶಿಕ್ಷಣದಂತಹ ನಾಲ್ಕು ಕ್ರಮಗಳಿಂದ ಮಾತ್ರ ರಸ್ತೆ ಅಪಘಾತಗಳನ್ನು ತಗ್ಗಿಸಲು ಸಾಧ್ಯ ಎಂದು ನಿತಿನ್ ಗಡ್ಕರಿ ಅಭಿಪ್ರಾಯ ಪಟ್ಟರು.

“ಸಮಾಜದ ಬಹು ದೊಡ್ಡ ಸಮಸ್ಯೆಯೆಂದರೆ, ಜನರಿಗೆ ಕಾನೂನಿನ ಬಗ್ಗೆ ಗೌರವೂ ಇಲ್ಲ, ಭಯವೂ ಇಲ್ಲ. ಕೆಂಪು ದೀಪಗಳ ಬಳಿ ವಾಹನಗಳನ್ನು ನಿಲ್ಲಿಸದಿರುವ, ಹೆಲ್ಮೆಟ್ ಧರಿಸದಿರುವಂಥ ಸಮಸ್ಯೆಗಳಿವೆ. ಪ್ರತಿ ವರ್ಷ ಹೆಲ್ಮೆಟ್ ಧರಿಸದಿರುವುದರಿಂದಲೇ 30,000 ಮಂದಿ ಸಾವನ್ನಪ್ಪುತ್ತಿದ್ದಾರೆ. ಸ್ವತಃ ನಾನೇ ರಸ್ತೆ ಅಪಘಾತದ ಸಂತ್ರಸ್ತನಾಗಿದ್ದು, ನಾನು ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕನಾಗಿದ್ದಾಗ ನಡೆದಿದ್ದ ರಸ್ತೆ ಅಪಘಾತದಲ್ಲಿ ನನ್ನ ಕಾಲಿನ ಮೂಳೆ ನಾಲ್ಕು ಕಡೆ ಮುರಿದಿತ್ತು. ಹೀಗಾಗಿ ನಾನು ಈ ವಿಷಯದ ಕುರಿತು ನಿರಂತರವಾಗಿ ಸೂಕ್ಷ್ಮತೆ ಹೊಂದಿದ್ದೇನೆ” ಎಂದು ಅವರು ತಿಳಿಸಿದರು.

“ನನಗೆ ಈ ವಿಷಯವನ್ನು ಒಪ್ಪಿಕೊಳ್ಳಲು ಯಾವುದೇ ಮುಜುಗರವಿಲ್ಲ. ಆದರೆ, ಕಠಿಣ ಪ್ರಯತ್ನಗಳ ಹೊರತಾಗಿಯೂ ಈ ವರ್ಷ 1.68 ಲಕ್ಷ ರಸ್ತೆ ಅಪಘಾತದ ಸಾವುಗಳು ಸಂಭವಿಸಿರುವುದರಿಂದ ಕುಗ್ಗಿ ಹೋಗಿದ್ದೇನೆ. ಈ ಪೈಕಿ ಬಹು ದೊಡ್ಡ ಪ್ರಮಾಣದ ಸಾವುಗಳು ರಸ್ತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸದೆ ಇರುವುದರಿಂದ ಆಗಿವೆ. ಸಾರ್ವಜನಿಕ ಪ್ರತಿನಿಧಿಗಳು, ಮಾಧ್ಯಮಗಳು ಹಾಗೂ ಸಮಾಜದ ಸಹಕಾರವಿಲ್ಲದೆ ಇದನ್ನು ತಡೆಯಲು ಸಾಧ್ಯವಿಲ್ಲ. ನಾವು ದಂಡಗಳನ್ನು ಹೆಚ್ಚಿಸಿದ್ದರೂ, ಜನರು ಮಾತ್ರ ನಿಯಮಗಳನ್ನು ಪಾಲಿಸುತ್ತಿಲ್ಲ” ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಬುಧವಾರ ನನ್ನ ಕಣ್ಣೆದುರಿಗೇ ಕಾರೊಂದು ಸಂಚಾರಿ ಸಿಗ್ನಲ್ ಅನ್ನು ಉಲ್ಲಂಘಿಸಿತು ಎಂದೂ ಅವರು ಹೇಳಿದರು.

ಈ ಕುರಿತು ಪ್ರತ್ಯೇಕ ಚರ್ಚೆಗೆ ಅವಕಾಶ ನೀಡಬೇಕು ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾರಿಗೆ ಮನವಿ ಮಾಡಿದ ನಿತಿನ್ ಗಡ್ಕರಿ, ಪರಿಸ್ಥಿತಿಯನ್ನು ಸುಧಾರಿಸಲು ಸರಕಾರ ಬದ್ಧವಾಗಿದೆ ಎಂದು ಪುನರುಚ್ಚರಿಸಿದರು.

“ಹೆದ್ದಾರಿಗಳಲ್ಲಿ ಕೆಲವು ರಸ್ತೆ ಗುಂಡಿಗಳ ಸಮಸ್ಯೆಯಿದ್ದು, ಈ ರಸ್ತೆ ಗುಂಡಿಗಳ ಸಮಸ್ಯೆಯನ್ನು ಪರಿಹರಿಸಲು 40,000 ಕೋಟಿ ರೂ. ವೆಚ್ಚ ಮಾಡಲು ಸರಕಾರ ಈಗಾಗಲೇ ನಿರ್ಧರಿಸಿದೆ. ವಿಸ್ತೃತ ಯೋಜನಾ ವರದಿಯಲ್ಲಿ ಗುರುತಿಸಲಾಗಿರುವ ಲೋಪಗಳ ಪ್ರಕಾರ, ಹೆದ್ದಾರಿಗಳಲ್ಲಿ ರಸ್ತೆ ಗುಂಡಿಗಳಿದ್ದು, ಈ ಸಮಸ್ಯೆಯನ್ನು ಪರಿಹರಿಸಲು ನಾವು ಬದ್ಧವಾಗಿದ್ದೇವೆ” ಎಂದು ಅವರು ಭರವಸೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News