ವ್ಯವಸ್ಥೆಯಿಂದ ಹೊರಗುಳಿದಿರುವ ಶೇ. 90ರಷ್ಟು ಮಂದಿಗಾಗಿ ಜಾತಿ ಗಣತಿಯ ಅಗತ್ಯವಿದೆ: ರಾಹುಲ್ ಗಾಂಧಿ

Update: 2024-08-24 16:31 GMT

ರಾಹುಲ್ ಗಾಂಧಿ | PTI 



ಪ್ರಯಾಗ್ ರಾಜ್: ದೇಶವ್ಯಾಪಿ ಜಾತಿ ಗಣತಿಗೆ ಮತ್ತೊಮ್ಮೆ ಒತ್ತಾಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ವ್ಯವಸ್ಥೆಯಿಂದ ಹೊರಗುಳಿದಿರುವ ಶೇ. 90ರಷ್ಟು ಮಂದಿಗಾಗಿ ಜಾತಿ ಗಣತಿಯ ಅಗತ್ಯವಿದ್ದು, ಅವರ ಹಿತಾಸಕ್ತಿಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲೇಬೇಕಿದೆ ಎಂದು ಶನಿವಾರ ಒತ್ತಿ ಹೇಳಿದರು.

ಕಾಂಗ್ರೆಸ್ ಪಾಲಿಗೆ ಜಾತಿ ಗಣತಿಯು ನೀತಿ ನಿರೂಪಣೆಯ ಬುನಾದಿ ಹಾಗೂ ಸಾಧನವಾಗಿದೆ ಎಂದೂ ಅವರು ಹೇಳಿದರು.

ಇಲ್ಲಿ ಆಯೋಜಿಸಲಾಗಿದ್ದ ‘ಸಂವಿಧಾನ್ ಸಮ್ಮಾನ್ ಸಮ್ಮೇಳನ್’ನಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ ಗಾಂಧಿ, “ಶೇ. 90ರಷ್ಟು ಮಂದಿ ವ್ಯವಸ್ಥೆಯಿಂದ ಹೊರಗೆ ಕುಳಿತಿದ್ದಾರೆ. ಅವರ ಬಳಿ ಕೌಶಲ ಹಾಗೂ ಜ್ಞಾನವಿದ್ದರೂ ವ್ಯವಸ್ಥೆಯೊಂದಿಗೆ ಯಾವುದೇ ಸಂಪರ್ಕ ಹೊಂದಿಲ್ಲ. ಇದೇ ಕಾರಣಕ್ಕಾಗಿ ನಾವು ಜಾತಿ ಗಣತಿಗಾಗಿ ಆಗ್ರಿಹಿಸುತ್ತಿದ್ದೇವೆ” ಎಂದು ಹೇಳಿದರು.

ಸಮಾಜದ ವಿವಿಧ ವರ್ಗಗಳ ಪಾಲುದಾರಿಕೆಯನ್ನು ಖಾತರಿ ಪಡಿಸುವುದಕ್ಕೂ ಮುನ್ನ, ಅವುಗಳ ಸಂಖ್ಯೆಯನ್ನು ಗಣತಿ ಮಾಡಬೇಕಾದ ಅಗತ್ಯವಿದೆ ಎಂದು ಲೋಕಸಭಾ ವಿರೋಧ ಪಕ್ಷದ ನಾಯಕರೂ ಆದ ರಾಹುಲ್ ಗಾಂಧಿ ಪ್ರತಿಪಾದಿಸಿದರು. ಕಾಂಗ್ರೆಸ್ ಪಾಲಿಗೆ ಜಾತಿ ಗಣತಿಯು ನೀತಿ ನಿರೂಪಣೆಯ ಬುನಾದಿಯಾಗಿದೆ. ನೀತಿ ನಿರೂಪಣೆಯ ಸಾಧನವಾಗಿದೆ. ಜಾತಿ ಗಣತಿ ಇಲ್ಲದೆ ನಾವು ನೈಜ ಭಾರತದಲ್ಲಿ ನೀತಿ ನಿರೂಪಣೆ ಮಾಡಲು ಸಾಧ್ಯವಿಲ್ಲ” ಎಂದು ಅವರು ಅಭಿಪ್ರಾಯಪಟ್ಟರು.

ಸಂವಿಧಾನದಂತೆಯೇ ಜಾತಿ ಗಣತಿ ಕೂಡಾ ಕಾಂಗ್ರೆಸ್ ಪಾಲಿಗೆ ನೀತಿ ನಿರೂಪಣೆಯ ಚೌಕಟ್ಟು ಹಾಗೂ ಮಾರ್ಗದರ್ಶಿಯಾಗಿದೆ ಎಂದೂ ಅವರು ಹೇಳಿದರು.

“ನಮಗೆ ದತ್ತಾಂಶ ಬೇಕಿದೆ. ಎಷ್ಟು ಮಂದಿ ದಲಿತರು, ಇತರೆ ಹಿಂದುಳಿದ ವರ್ಗಗಳು, ಆದಿವಾಸಿಗಳು, ಮಹಿಳೆಯರು, ಅಲ್ಪಸಂಖ್ಯಾತರು ಹಾಗೂ ಸಾಮಾನ್ಯ ಜಾತಿಯ ಜನರಿದ್ದಾರೆ ಎಂಬುದು ಬೇಕಿದೆ. ನಾವು ಈ ಜಾತಿ ಗಣತಿಯ ಆಗ್ರಹದ ಮೂಲಕ ಸಂವಿಧಾನವನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದೇವೆ” ಎಂದು ಅವರು ತಿಳಿಸಿದರು.

ಸಂವಿಧಾನವು ಕೇವಲ ಶೇ. 10ರಷ್ಟು ಜನರಿಗೆ ಮಾತ್ರವಲ್ಲ; ಬದಲಿಗೆ, ದೇಶದ ಎಲ್ಲ ನಾಗರಿಕರಿಗೂ ಸೇರಿದ್ದು ಎಂದು ರಾಹುಲ್ ಗಾಂಧಿ ಪುನರುಚ್ಚರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News