ದಯವಿಟ್ಟು ಇಂಪ್ಯಾಕ್ಟ್ ಪ್ಲೇಯರ್ ನಿಯಮ ರದ್ದುಪಡಿಸಿ: ಮುಹಮ್ಮದ್ ಸಿರಾಜ್
ಚೆನ್ನೈ : ಇಂಪ್ಯಾಕ್ಟ್ ಪ್ಲೇಯರ್ ನಿಯಮವು ಬ್ಯಾಟರ್ ಗಳ ಸ್ನೇಹಿಯಾಗಿದೆ. ದಯವಿಟ್ಟು ಇದನ್ನು ರದ್ದು ಮಾಡಬೇಕು ಎಂದು ಭಾರತ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ)ತಂಡದ ವೇಗದ ಬೌಲರ್ ಮುಹಮ್ಮದ್ ಸಿರಾಜ್ ಆಗ್ರಹಿಸಿದ್ದಾರೆ.
ದಯವಿಟ್ಟು ಇಂಪ್ಯಾಕ್ಟ್ ಪ್ಲೇಯರ್ ನಿಯಮ ರದ್ದುಪಡಿಸಿ. ಪಿಚ್ ಬೌಲರ್ ಗಳಿಗೆ ಸ್ನೇಹಿಯಾಗಿರುವುದಿಲ್ಲ. ಇದರಿಂದ ಬೌಲರ್ ಗಳಿಗೆ ಯಾವುದೇ ಲಾಭವಿಲ್ಲ ಎಂದು ಸಿರಾಜ್ ಹೇಳಿದರು.
ಸನ್ರೈಸರ್ಸ್ ಹೈದರಾಬಾದ್ ತಂಡ ಈ ವರ್ಷದ ಐಪಿಎಲ್ ನಲ್ಲಿ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಐಪಿಎಲ್ನಲ್ಲಿ ಗರಿಷ್ಠ ಮೊತ್ತ(287 ರನ್)ಕಲೆ ಹಾಕಿತ್ತು. ಈ ವರ್ಷ ಮುಂಬೈ ಇಂಡಿಯನ್ಸ್ ವಿರುದ್ಧ 277 ರನ್ ಗಳಿಸಿ ತನ್ನದೇ ದಾಖಲೆಯನ್ನು ಮುರಿದಿದೆ. ಕಳೆದ ವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 266 ರನ್ ಗಳಿಸಿದ್ದ ಹೈದರಾಬಾದ್ ತಂಡ ಈ ಋತುವಿನಲ್ಲಿ ಮೂರನೇ ಬಾರಿ 250ಕ್ಕೂ ಅಧಿಕ ರನ್ ಗಳಿಸಿತು.
ತಂಡವೊಂದು 250ಕ್ಕೂ ಅಧಿಕ ರನ್ ಗಳಿಸಿ ತುಂಬಾ ಸಮಯ ಕಳೆದಿದೆ. ಆದರೆ ಈಗ ಇದು ಸಾಮಾನ್ಯವಾಗಿ ಬಿಟ್ಟಿದೆ ಎಂದು ಸಿರಾಜ್ ಹೇಳಿದರು.
ಈ ಮೊದಲು ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಕೂಡ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು. ನಾನು ಈ ನಿಯಮದ ಅಭಿಮಾನಿಯಲ್ಲ. ಆಟವನ್ನು 11 ಆಟಗಾರರೊಂದಿಗೆ ಆಡುತ್ತಾರೆಯೇ ಹೊರತು 12 ಆಟಗಾರರೊಂದಿಗಲ್ಲ ಎಂದು ರೋಹಿತ್ ಹೇಳಿದ್ದರು.
ಕಳೆದ ಐಪಿಎಲ್ ಋತುವಿನಲ್ಲಿ ಈ ನಿಯಮವನ್ನು ಪರಿಚಯಿಸಲಾಗಿತ್ತು. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಈ ನಿಯಮವನ್ನು ಪ್ರಯೋಗಿಸಲಾಗಿತ್ತು.