ಪಿಎಂ ಕೇರ್ಸ್ ಫಂಡ್ ಬಗ್ಗೆ ತನಿಖೆಯಾಗಲಿ: ಉದ್ಧವ್ ಠಾಕ್ರೆ
ಮುಂಬೈ: ಕೊರೋನ ವೈರಸ್ ಸಾಂಕ್ರಾಮಿಕದ ಅವಧಿಯಲ್ಲಿ ಸ್ಥಾಪಿಸಲಾಗಿದ್ದ ಪಿಎಂ ಕೇರ್ಸ್ ನಿಧಿಯ ಹಣವನ್ನು ಹೇಗೆ ಬಳಸಲಾಗುತ್ತಿದೆ ಎಂಬ ಬಗ್ಗೆ ತನಿಖೆಯಾಗಬೇಕು ಎಂದು ಶಿವಸೇನೆ (ಉದ್ಧವ್ ಠಾಕ್ರೆ ಬಣ) ಅಧ್ಯಕ್ಷ ಉದ್ಧವ್ ಠಾಕ್ರೆ ಗುರುವಾರ ಒತ್ತಾಯಿಸಿದ್ದಾರೆ.
ಬೃಹನ್ಮುಂಬಯಿ ಮುನಿಸಿಪಲ್ ಕಾರ್ಪೊರೇಶನ್ (BMC)ನಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿದ್ದರೆ ಅದನ್ನು ತನಿಖೆ ಮಾಡಿ, ಆದರೆ ಸಾಂಕ್ರಾಮಿಕ ಅವಧಿಯಲ್ಲಿ ರಾಜ್ಯಗಳು ಮಾಡಿರುವ ಕಾಮಗಾರಿಗಳ ಬಗ್ಗೆಯೂ ತನಿಖೆ ಮಾಡಿ ಎಂದು ಇಲ್ಲಿ ಸಮಾರಂಭವೊಂದರಲ್ಲಿ ಮಾತನಾಡಿದ ಅವರು ಹೇಳಿದರು. ಅವಿಭಜಿತ ಶಿವಸೇನೆಯು ಬಿಎಮ್ಸಿಯಲ್ಲಿ 20ಕ್ಕೂ ಹೆಚ್ಚು ವರ್ಷಗಳ ಕಾಲ ಆಡಳಿತ ನಡೆಸಿದೆ.
ಭಾರತೀಯ ಸ್ವಾತಂತ್ರ ಸಂಗ್ರಾಮದೊಂದಿಗೆ ಯಾವುದೇ ಸಂಬಂಧ ಹೊಂದಿರದಿದ್ದ ಸಿದ್ಧಾಂತವು ಈಗ ದೇಶವನ್ನು ಆಳುತ್ತಿದೆ ಎಂದು ಬಿಜೆಪಿಯನ್ನು ಉಲ್ಲೇಖಿಸುತ್ತಾ ಅವರು ಹೇಳಿದರು.
‘‘ಸಾಂಕ್ರಾಮಿಕ ಅವಧಿಯಲ್ಲಿ ಎಲ್ಲಾ ರಾಜ್ಯಗಳು ಮಾಡಿರುವ ಕೆಲಸದ ಬಗ್ಗೆ ತನಿಖೆ ನಡೆಸಿ. ಬಿಎಂಸಿ ಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಬಗ್ಗೆಯೂ ತನಿಖೆ ಮಾಡಿ. ಆದರೆ, ಪಿಎಮ್ ಕೇರ್ಸ್ ಫಂಡ್ ಬಗ್ಗೆಯೂ ತನಿಖೆ ಮಾಡಿ. ಯಾಕೆಂದರೆ ಅದು ಜನರ ಹಣ. ಅದು ಹೇಗೆ ಖರ್ಚಾಗಿದೆ ಎನ್ನುವುದು ಜನರಿಗೆ ತಿಳಿಯಬೇಕು’’ ಎಂದರು.