ಅಗತ್ಯದ ಸಮಯದಲ್ಲಿ ಮಣಿಪುರದ ಕೈಬಿಟ್ಟ ಮೋದಿ: ಜೈರಾಮ್ ರಮೇಶ್

Update: 2023-10-24 16:09 GMT

Photo: PTI

ಹೊಸದಿಲ್ಲಿ: ಮಣಿಪುರ ಬಿಕ್ಕಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮಧ್ಯಪ್ರವೇಶದ ಅತ್ಯಂತ ಅಗತ್ಯವಿದ್ದ ಸಮಯದಲ್ಲಿಯೇ ಅವರು ಆ ರಾಜ್ಯದ ಕೈಬಿಟ್ಟಿದ್ದಾರೆಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಂಗಳವಾರ ಆರೋಪಿಸಿದ್ದಾರೆ.

ಮಣಿಪುರ ಬಿಕ್ಕಟ್ಟನ್ನು ಸಂಪೂರ್ಣವಾಗಿ ಕಡೆಗಣಿಸುವ ಮೂಲಕ ಪ್ರಧಾನಿಯವರು ತನ್ನ ಉತ್ತರದಾಯಿತ್ವ ಹಾಗೂ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವಂತಿಲ್ಲವೆಂದು ಅವರು ತಿಳಿಸಿದ್ದಾರೆ.

ಮಣಿಪುರ ಬಿಕ್ಕಟ್ಟಿನಲ್ಲಿ ಪ್ರಧಾನಿಯವರ ಮಧ್ಯಪ್ರವೇಶ ಹಾಗೂ ಸ್ಪಂದನೆಯು ಅತ್ಯಂತ ಅಗತ್ಯವಿದ್ದ ಸಮಯದಲ್ಲೇ ಅವರು ಮಣಿಪುರವನ್ನು ಹೇಗೆ ಕೈಬಿಟ್ಟರೆಂಬುದನ್ನು ಮಣಿಪುರದ ಹಾಗೂ ಇಡೀ ಈಶಾನ್ಯ ಭಾರತದ ಜನತೆ ನಿಕಟವಾಗಿ ನೋಡುತ್ತಿದ್ದಾರೆ ಎಂದು ರಮೇಶ್ ಅವರು ‘x’ನಲ್ಲಿ ಪೋಸ್ಟ್ ಮಾಡಿದ ಸಂದೇಶದಲ್ಲಿ ತಿಳಿಸಿದ್ದಾರೆ.

ಮಣಿಪುರ ಬಿಕ್ಕಟ್ಟನ್ನು ನಿಭಾಯಿಸುವ ನಿಟ್ಟಿನಲ್ಲಿ ಪ್ರಧಾನಿಯವರ ಸೂಕ್ತ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆಂಬುದರ ಬಗ್ಗೆ ಅವರು ಹಲವಾರು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

ಪ್ರಧಾನಿಯವರು ಮಣಿಪುರದ ಮುಖ್ಯಮಂತ್ರಿಯವರನ್ನಾಗಲಿ ಅಥವಾ ಅವರ ಪಕ್ಷದ ಅಥವಾ ಮಿತ್ರ ಪಕ್ಷದ ಶಾಸಕರೇ ಅಧಿಕಸಂಖ್ಯೆಯಲ್ಲಿದ್ದರೂ ಅವರನ್ನು ಯಾಕೆ ಭೇಟಿಯಾಗಿಲ್ಲವೆಂದು ರಮೇಶ್ ಪ್ರಶ್ನಿಸಿದರು.

ಎಲ್ಲಾ ವಿಷಯಗಳ ಬಗ್ಗೆಯೂ ಮಣಿಪುರದ ಕುರಿತು ಪ್ರಧಾನಿಯವರು 4-5 ನಿಮಿಷಗಳಿಗೂ ಹೆಚ್ಚು ಸಮಯ, ಅದೂ ಕೂಡಾ ಸಾಮಾನ್ಯವಾದ ರೀತಿಯಲ್ಲಿ ಹಾಗೂ ಪ್ರತಿಪಕ್ಷಗಳ ತೀವ್ರ ಒತ್ತಡದ ಹೊರತಾಗಿಯೂ ಮಾತನಾಡದೆ ಇರುವುದು ಸೂಕ್ತವೆಂದು ಅವರು ಯಾಕೆ ಭಾವಿಸಿದ್ದಾರೆಂದು ಕಾಂಗ್ರೆಸ್ ನಾಯಕ ಪ್ರಶ್ನಿಸಿದ್ದಾರೆ.

ಸಣ್ಣಪುಟ್ಟ ಕಾರಣಕ್ಕೂ ಪ್ರಯಾಣವನ್ನು ಇಷ್ಟಪಡುವ ಪ್ರಧಾನಿಯವರು ತನ್ನ ಕಾಳಜಿಯನ್ನು ತೋರ್ಪಡಿಸಿಕೊಳ್ಳಲಿಕ್ಕಾದರೂ ಕೆಲವು ತಾಸುಗಳವರೆಗೆ ಮಣಿಪುರದಲ್ಲಿ ಸಮಯ ಕಳೆಯುವುದು ಯೋಗ್ಯವೆಂದು ಯಾಕೆ ಭಾವಿಸುತ್ತಿಲ್ಲ ಎಂದು ರಮೇಶ್ ‘x’ನಲ್ಲಿ ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News