ದಿಲ್ಲಿಯಲ್ಲಿ ಆನ್‌ಲೈನ್ ಪಟಾಕಿ ಮಾರಾಟ ನಿಲ್ಲಿಸಲು ಇ-ಕಾಮರ್ಸ್ ತಾಣಗಳಿಗೆ ಪೋಲಿಸರ ಆದೇಶ
ಹೊಸದಿಲ್ಲಿ : ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ)ದಲ್ಲಿ ಅಲ್ಪಮಟ್ಟಿಗೆ ಸುಧಾರಣೆ ಕಂಡು ಬಂದಿದ್ದು, ಪಟಾಕಿಗಳ ಆನ್‌ಲೈನ್ ಮಾರಾಟವನ್ನು ನಿಲ್ಲಿಸುವಂತೆ ದಿಲ್ಲಿ ಪೋಲಿಸರು ಇ-ಕಾಮರ್ಸ್ ತಾಣಗಳು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಆದೇಶಿಸಿದ್ದಾರೆ.
ಪಟಾಕಿಗಳ ಮಾರಾಟ ಮತ್ತು ವಿತರಣೆಯನ್ನು ತಡೆಯಲು ಲೊಕೇಶನ್ ಆಧರಿತ ನಿರ್ಬಂಧಗಳನ್ನು ಸಕ್ರಿಯಗೊಳಿಸುವಂತೆ ಪೋಲಿಸರು ಈ ವೆಬ್‌ಸೈಟ್‌ಗಳಿಗೆ ಸೂಚಿಸಿದ್ದಾರೆ. ದಿಲ್ಲಿಯಲ್ಲಿ ಪಟಾಕಿಗಳು,ಅವುಗಳ ಮಾರಾಟ ಮತ್ತು ವಿತರಣೆಯ ಮೇಲಿನ ನಿಷೇಧದ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡುವ ಸ್ಪಷ್ಟ ನೋಟಿಸನ್ನೂ ಈ ವೆಬ್‌ಸೈಟ್‌ಗಳು ಪ್ರಕಟಿಸಬೇಕಿವೆ.
ದಿಲ್ಲಿ ಸರಕಾರವು ಕಳೆದ ತಿಂಗಳು ದಿಲ್ಲಿಯಲ್ಲಿ ಪಟಾಕಿಗಳ ತಯಾರಿಕೆ, ದಾಸ್ತಾನು ಮತ್ತು ಸಿಡಿಸುವಿಕೆಯನ್ನು 2025, ಜ.1ರವರೆಗೆ ನಿಷೇಧಿಸಿ ಆದೇಶಿಸಿತ್ತು.
ನಗರದಲ್ಲಿ ತೀವ್ರ ವಾಯುಮಾಲಿನ್ಯ ಮುಂದುವರಿದಿರುವ ಹಿನ್ನೆಲೆಯಲ್ಲಿ ದಿಲ್ಲಿ ಸರಕಾರವು ತನ್ನ ಮತ್ತು ಎಂಸಿಡಿಯ ಅರ್ಧದಷ್ಟು ಸಿಬ್ಬಂದಿಗಳಿಗೆ ಮನೆಗಳಿಂದಲೇ ಕಾರ್ಯ ನಿರ್ವಹಿಸುವಂತೆ ಸೂಚಿಸಿದೆ. ಬಿಕ್ಕಟ್ಟು ಶಮನಕ್ಕೆ ನೆರವಾಗಲು ಇಂತಹುದೇ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪರಿಸರ ಸಚಿವ ಗೋಪಾಲ ರಾಯ್ ಅವರು ಖಾಸಗಿ ಕಚೇರಿಗಳು,ಕೈಗಾರಿಕೆಗಳು ಮತ್ತು ಉದ್ಯಮಗಳನ್ನು ಆಗ್ರಹಿಸಿದ್ದಾರೆ.
ತುರ್ತು ಮತ್ತು ಅಗತ್ಯ ಸೇವೆಗಳನ್ನು ಒದಗಿಸುವ ಕಚೇರಿಗಳು ಪೂರ್ಣ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಲಿವೆ.