ಕಾಂಗ್ರೆಸ್‌ನ ‘ದೇಶಕ್ಕಾಗಿ ದೇಣಿಗೆ ’ ಅಭಿಯಾನಕ್ಕೆ ಚಾಲನೆ ನೀಡಿದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ಹೊಸದಿಲ್ಲಿ : ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಸೋಮವಾರ 1.38 ಲಕ್ಷ ರೂ.ಗಳ ದೇಣಿಗೆಯನ್ನು ನೀಡುವ ಮೂಲಕ ಪಕ್ಷದ ಆನ್‌ಲೈನ್ ಕ್ರೌಡ್‌ಫಂಡಿಂಗ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉತ್ತಮ ಭಾರತ ನಿರ್ಮಾಣಕ್ಕಾಗಿ ಕಾಂಗ್ರೆಸ್‌ನ ಪ್ರಯತ್ನಗಳಿಗೆ ಹಣವನ್ನು ದೇಣಿಗೆ ನೀಡುವಂತೆ ಅವರು ಪಕ್ಷದ ಬೆಂಬಲಿಗರನ್ನು ಆಗ್ರಹಿಸಿದರು.
ಕಾಂಗ್ರೆಸ್‌ನ ಖಜಾನೆ ಬರಿದಾಗುತ್ತಿದ್ದು, ಎಪ್ರಿಲ್-ಮೇ ತಿಂಗಳಿನಲ್ಲಿ ನಡೆಯುವ ಲೋಕಸಭಾ ಚುನಾವಣೆಗಳನ್ನು ಎದುರಿಸಲು ಅದಕ್ಕೆ ಹಣಕಾಸಿನ ಅಗತ್ಯವಿರುವ ಹಿನ್ನೆಲೆಯಲ್ಲಿ ಪಕ್ಷವು ‘ಡೊನೇಟ್ ಫಾರ್ ದೇಶ್ʼ (ದೇಶಕ್ಕಾಗಿ ದೇಣಿಗೆ ನೀಡಿ) ಅಭಿಯಾನವನ್ನು ಹಮ್ಮಿಕೊಂಡಿದೆ. ಅಭಿಯಾನವು ಅಸಹಕಾರ ಆಂದೋಲನಕ್ಕಾಗಿ ಹಣವನ್ನು ಸಂಗ್ರಹಿಸಲು ಮಹಾತ್ಮಾ ಗಾಂಧಿಯವರ ‘ಟಿಳಕ್ ಸ್ವರಾಜ್ ಫಂಡ್ ’ನಿಂದ ಪ್ರೇರಿತಗೊಂಡಿದೆ ಎಂದು ಕಾಂಗ್ರೆಸ್ ಹೇಳಿದೆ.
‘ಶ್ರೀಮಂತರಿಂದಲೇ ಹಣವನ್ನು ಸಂಗ್ರಹಿಸುತ್ತಿದ್ದರೆ ಅವರ ಇಚ್ಛೆಗಳಿಗೆ ಅನುಗುಣವಾಗಿ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ರೂಪಿಸಬೇಕಾಗುತ್ತದೆ. ನಮ್ಮ ಪಕ್ಷವು ಯಾವಾಗಲೂ ಹಿಂದುಳಿದವರು, ದಲಿತರು, ಆದಿವಾಸಿಗಳು, ಒಬಿಸಿಗಳು, ಅಲ್ಪಸಂಖ್ಯಾತರು ಮತ್ತು ಮೇಲ್ಜಾತಿಗಳೊಂದಿಗೆ ನಿಂತಿದೆ. ನಾವು ಅವರಿಗೆ ನೆರವಾಗಲು ಬಯಸಿದ್ದೇವೆ ’ ಎಂದು ಹೇಳಿದ ಖರ್ಗೆ, ಜನಸಾಮಾನ್ಯರ ನೆರವಿನೊಂದಿಗೆ ದೇಶ ನಿರ್ಮಾಣವು ಅಭಿಯಾನದ ಉದ್ದೇಶವಾಗಿದೆ ಎಂದರು.
ಕಾಂಗ್ರೆಸ್‌ನ ನಿಧಿ ಸಂಗ್ರಹ ಅಭಿಯಾನಕ್ಕೆ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಹಣವನ್ನು ದೇಣಿಗೆ ನೀಡಬಹುದು. ಡಿ.28ರಂದು ಪಕ್ಷವು 138 ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ 138 ರ ಗುಣಕಗಳಲ್ಲಿ (ಉದಾ 138 ರೂ.,1,380 ರೂ.,13,800 ರೂ.) ದೇಣಿಗೆಯನ್ನು ನೀಡುವಂತೆ ಅದು ಬೆಂಬಲಿಗರನ್ನು ಕೇಳಿಕೊಂಡಿದೆ.
ತನ್ನ ರಾಜ್ಯಮಟ್ಟದ ಪದಾಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು, ಜಿಲ್ಲಾ ಮತ್ತು ರಾಜ್ಯ ಅಧ್ಯಕ್ಷರು ಹಾಗೂ ಎಐಸಿಸಿ ಪದಾಧಿಕಾರಿಗಳು ತಲಾ ಕನಿಷ್ಠ 1,380 ರೂ.ಗಳ ದೇಣಿಗೆಯನ್ನು ನೀಡಬೇಕೆಂದು ಪಕ್ಷವು ಬಯಸಿದೆ.
ಆರಂಭದಲ್ಲಿ ಡಿ.28ರವರೆಗೆ ಆನ್‌ಲೈನ್‌ನಲ್ಲಿ ಅಭಿಯಾನವು ನಡೆಯಲಿದ್ದು, ನಂತರ ಸ್ವಯಂಸೇವಕರು ಕನಿಷ್ಠ 138 ರೂ.ಗಳ ದೇಣಿಗೆ ಸಂಗ್ರಹದ ಗುರಿಯೊಂದಿಗೆ ಪ್ರತಿ ಬೂತ್‌ನಲ್ಲಿಯ ಕನಿಷ್ಠ 10 ಮನೆಗಳಿಗೆ ಭೇಟಿ ನೀಡಲಿದ್ದಾರೆ. ಆನ್‌ಲೈನ್ ದೇಣಿಗೆಗಾಗಿ ಪಕ್ಷವು www.donateinc.in ಮತ್ತು www.inc.in ಎಂಬ ಎರಡು ಚಾನೆಲ್‌ಗಳನ್ನು ಸ್ಥಾಪಿಸಿದೆ.