ವಯನಾಡ್ ಉಪಚುನಾವಣೆ | ನಾಳೆ ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಕೆ
ಹೊಸದಿಲ್ಲಿ : ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಗಾಗಿ ಬುಧವಾರ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಮುನ್ನ ಪ್ರಿಯಾಂಕಾ ಸೋಮವಾರ ಖರ್ಗೆಯವರನ್ನು ಭೇಟಿಯಾಗಿ ಆಶೀರ್ವಾದಗಳನ್ನು ಪಡೆದುಕೊಂಡಿದ್ದರು.
ಬುಧವಾರ ರಾಹುಲ್ ಮತ್ತು ಪ್ರಿಯಾಂಕಾ ಕಲ್ಪೆಟ್ಟಾದಲ್ಲಿ ರೋಡ್ ಶೋ ನಡೆಸಲಿದ್ದಾರೆ. ಬಳಿಕ ಪ್ರಿಯಾಂಕಾ ಯುಡಿಎಫ್ ಅಭ್ಯರ್ಥಿಯಾಗಿ ಜಿಲ್ಲಾಧಿಕಾರಿಗಳಿಗೆ ತನ್ನ ನಾಮಪತ್ರ ಸಲ್ಲಿಸಲಿದ್ದಾರೆ.
ಕಾಂಗ್ರೆಸ್ ಮುಖ್ಯಮಂತ್ರಿಗಳು, ಪ್ರಮುಖ ರಾಷ್ಟ್ರೀಯ ಮತ್ತು ರಾಜ್ಯ ನಾಯಕರು ಪ್ರಿಯಾಂಕಾಗೆ ಬೆಂಬಲ ಸೂಚಿಸಲು ಹಾಜರಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿದವು.
ರಾಹುಲ್ ಗಾಂಧಿ ವಯನಾಡ್ ಲೋಕಸಭಾ ಕ್ಷೇತ್ರದಿಂದ ಸತತ ಎರಡು ಬಾರಿ ಆಯ್ಕೆಯಾಗಿದ್ದರು.
ಉಪಚುನಾವಣೆಯಲ್ಲಿ ಗೆದ್ದರೆ ಪ್ರಿಯಾಂಕಾ ಮೊದಲ ಬಾರಿಗೆ ಲೋಕಸಭೆಯನ್ನು ಪ್ರವೇಶಿಸಲಿದ್ದಾರೆ.
ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ನ.13ರಂದು ಮತದಾನ ನಡೆಯಲಿದ್ದು, ನ.23ರಂದು ಫಲಿತಾಂಶ ಹೊರಬೀಳಲಿದೆ.