“ಎಲ್ಲಿದೆ ಮಾನವೀಯತೆ?”: ಗಾಝಾ ಮೇಲೆ ಇಸ್ರೇಲ್ ಬಾಂಬ್ ದಾಳಿಗೆ ಪ್ರಿಯಾಂಕಾ ಗಾಂಧಿ ಆಕ್ರೋಶ

Update: 2023-12-07 08:59 GMT

ಪ್ರಿಯಾಂಕಾ ಗಾಂಧಿ ವಾದ್ರಾ

ಹೊಸದಿಲ್ಲಿ: ಗಾಝಾ ಮೇಲಿನ ಇಸ್ರೇಲ್ ಬಾಂಬ್ ದಾಳಿಯು ಮಾನವೀಯ ನೆರವಿಗಾಗಿ ಘೋಷಿಸಲಾಗಿದ್ದ ಕದನ ವಿರಾಮದ ಅವಧಿಯ ಹಿಂದಿಗಿಂತಲೂ ತೀವ್ರವಾಗಿರುವ ಬೆನ್ನಿಗೇ, ಅಂತಾರಾಷ್ಟ್ರೀಯ ಸಮುದಾಯದ ಸದಸ್ಯನಾಗಿರುವ ಭಾರತವು ಸತ್ಯದ ಪರ ನಿಲ್ಲಬೇಕು ಹಾಗೂ ಆದಷ್ಟೂ ತ್ವರಿತವಾಗಿ ಕದನ ವಿರಾಮ ಏರ್ಪಡುವುದನ್ನು ಖಾತ್ರಿಗೊಳಿಸಬೇಕು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಆಗ್ರಹಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆದ ಪ್ರಿಯಾಂಕಾ ಗಾಂಧಿ ವಾದ್ರಾ, ಭಾರತವು ಎಂದಿಗೂ ನ್ಯಾಯದ ಪರ ನಿಂತಿದೆ ಹಾಗೂ ದೀರ್ಘಕಾಲದಿಂದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಫೆಲೆಸ್ತೀನ್ ಜನರನ್ನು ಬೆಂಬಲಿಸಿದೆ ಎಂದು ಹೇಳಿದ್ದಾರೆ.

“ಮಾನವೀಯ ನೆರವಿಗಾಗಿ ಘೋಷಿಸಲಾಗಿದ್ದ ಕದನ ವಿರಾಮದ ಅವಧಿಯ ಹಿಂದಿಗಿಂತಲೂ ಗಾಝಾ ಮೇಲಿನ ನಿರ್ದಯ ಬಾಂಬ್ ದಾಳಿಯು ತೀವ್ರಗೊಂಡಿದೆ. ಆಹಾರ ಪೂರೈಕೆಯ ಕೊರತೆ, ವೈದ್ಯಕೀಯ ಸೌಲಭ್ಯಗಳ ನಾಶ ಹಾಗೂ ಮೂಲಭೂತ ಸೌಕರ್ಯಗಳನ್ನು ಸ್ಥಗಿತಗೊಳಿಸಲಾಗಿದೆ” ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಗಾಝಾ ಮೇಲಿನ ಬಾಂಬ್ ದಾಳಿಯಲ್ಲಿ ಇಡೀ ದೇಶವೇ ಧ್ವಂಸಗೊಂಡಿದ್ದು, ಈ ದಾಳಿಯಲ್ಲಿ 10,000 ಮಕ್ಕಳು, 60ಕ್ಕೂ ಹೆಚ್ಚು ಪತ್ರಕರ್ತರು ಹಾಗೂ ನೂರಾರು ಮಂದಿ ವೈದ್ಯಕೀಯ ಕಾರ್ಯಕರ್ತರು ಸೇರಿದಂತೆ ಸುಮಾರು 16,000 ಮಂದಿ ಹತರಾಗಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

“ಇಡೀ ದೇಶ ನಾಶವಾಗಿದೆ. ನಮ್ಮಲ್ಲರಂತೆಯೇ ಅವರೂ ಕನಸುಗಳನ್ನು ಕಟ್ಟಿಕೊಂಡಿದ್ದಾರೆ. ಆದರೆ ನಮ್ಮ ಕಣ್ಣೆದುರೇ ಯಾವುದೇ ಕನಿಕರವಿಲ್ಲದೆ ಹತ್ಯೆಗೈಯಲಾಗುತ್ತಿದೆ. ಎಲ್ಲಿದೆ ನಮ್ಮ ಮಾನವೀಯತೆ” ಎಂದು ಪ್ರಿಯಾಂಕ ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News