ಈ ವರ್ಷ 1,500ಕ್ಕೂ ಅಧಿಕ ಬೀದಿ ಮಕ್ಕಳ ರಕ್ಷಣೆ: ಲೋಕಸಭೆಯಲ್ಲಿ ಮಾಹಿತಿ ನೀಡಿದ ಕೇಂದ್ರ ಸರಕಾರ
ಹೊಸದಿಲ್ಲಿ: ದೇಶಾದ್ಯಂತ ಈ ವರ್ಷ ಇದುವರೆಗೆ 1,500ಕ್ಕೂ ಅಧಿಕ ಬೀದಿ ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಕೇಂದ್ರ ಸರಕಾರ ಲೋಕಸಭೆಯಲ್ಲಿ ಶುಕ್ರವಾರ ಮಾಹಿತಿ ನೀಡಿದೆ. ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಮಹಿಳೆ ಹಾಗೂ ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ, ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗ (ಎನ್ಸಿಪಿಸಿಆರ್)ಕಾರ್ಯಾಚರಣೆ ನಡೆಸಿ 1,551 ಬೀದಿ ಮಕ್ಕಳನ್ನು ರಕ್ಷಿಸಿದೆ ಎಂದು ತಿಳಿಸಿದ್ದಾರೆ.
ಎನ್ಸಿಪಿಸಿಆರ್ ಬೀದಿ ಮಕ್ಕಳನ್ನು ರಕ್ಷಿಸಿದ ಬಳಿಕ ಅವರವರ ಪ್ರದೇಶದಲ್ಲಿರುವ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲುಸಿ)ಮುಂದೆ ಹಾಜರುಪಡಿಸಿದೆ. ಅಲ್ಲದೆ ಅವರಿಗೆ ಪುನರ್ವಸತಿ ಕಲ್ಪಿಸುವ ಕುರಿತು ಖಾತರಿ ನೀಡಿದೆ ಎಂದು ಇರಾನಿ ತಿಳಿಸಿದ್ದಾರೆ.
ರಕ್ಷಿಸಲಾದ ಮಕ್ಕಳ ಗುರುತು ಪತ್ತೆ ಹಚ್ಚುವ ಪ್ರಕ್ರಿಯೆಯಲ್ಲಿ ಎನ್ಸಿಪಿಸಿಆರ್ ತೊಡಗಿದೆ ಎಂದು ಎಂದು ಹೇಳಿರುವ ಸ್ಮತಿ ಇರಾನಿ, ನಿರ್ವಸಿತ ಮಕ್ಕಳು ಅತ್ಯಧಿಕ ಸಂಖ್ಯೆಯಲ್ಲಿ ಪತ್ತೆಯಾಗುವ ಹಾಟ್ ಸ್ಪಾಟ್ ಕುರಿತು ಇದುವರೆಗೆ 24 ರಾಜ್ಯಗಳು ಮಾಹಿತಿ ಹಂಚಿಕೊಂಡಿವೆ ಎಂದರು.