ಪ್ರತಿಭಟನಾ ನಿರತ ಟಿಎಂಸಿ ಸಂಸದರನ್ನು ಚುನಾವಣಾ ಆಯೋಗದ ಎದುರಲ್ಲೇ ಬಂಧಿಸಿದ ಪೊಲೀಸರು

Update: 2024-04-09 04:42 GMT

Photo: ANI

ಹೊಸದಿಲ್ಲಿ: ಚುನಾವಣಾ ಆಯೋಗದ ಕೇಂದ್ರ ಕಚೇರಿ ಎದುರು ಧರಣಿ ನಿರತರಾಗಿದ್ದ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ನ 10 ಮಂದಿ ಸಂಸದರ ನಿಯೋಗದ ಸದಸ್ಯರನ್ನು ಪೊಲೀಸರು ಸೋಮವಾರ ವಶಕ್ಕೆ ಪಡೆದರು. ಪೊಲೀಸರು ಪ್ರತಿಭಟನಾನಿರತರನ್ನು ಎಳೆದಾಡಿಕೊಂಡು, ಕೆಲವರನ್ನು ಅಕ್ಷರಶಃ ಎತ್ತಿಕೊಂಡು ಬಸ್ಸಿಗೆ ತಳ್ಳುತ್ತಿರುವ ದೃಶ್ಯಗಳು ಜಾಲತಾಣಗಳಲ್ಲಿ ವೈರಲ್ ಆಗಿವೆ.

ಬಿಜೆಪಿ ಸರ್ಕಾರ ಕೇಂದ್ರೀಯ ಏಜೆನ್ಸಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆಪಾದಿಸಿ ಸಂಸದರು ಪ್ರತಿಭಟನೆ ನಡೆಸುತ್ತಿದ್ದರು. ಕಾನೂನು ಜಾರಿ ನಿರ್ದೇಶನಾಲಯ, ಸೆಂಟ್ರಲ್ ಬ್ಯೂರೊ ಆಫ್ ಇನ್ ವೆಸ್ಟಿಗೇಶನ್, ಆದಾಯ ತೆರಿಗೆ ಇಲಾಖೆ ಮತ್ತು ರಾಷ್ಟ್ರೀಯ ತನಿಖಾ ಏಜೆನ್ಸಿಯ ಮುಖ್ಯಸ್ಥರನ್ನು ತಕ್ಷಣವೇ ಬದಲಿಸಬೇಕು ಎಂದು ಪ್ರತಿಭಟನಾನಿರತರು ಪಟ್ಟು ಹಿಡಿದರು.

ಪೊಲೀಸರು ವಶಕ್ಕೆ ಪಡೆದ ಬಳಿಕ, ಠಾಣೆಯಿಂದಲೇ 24 ಗಂಟೆಗಳ ಧರಣಿ ಮುಂದುವರಿಸುವುದಾಗಿ ಸಂಸದರು ಹೇಳಿದ್ದಾರೆ.

ಕೆಲ ಸಂಸದರನ್ನು ಕಸ್ಟಡಿಯಲ್ಲಿ ಇಡಲಾಗಿದೆ. ಪಕ್ಷದ ರಾಜ್ಯಸಭಾ ಮುಖಂಡ ಡೆರಿಕ್ ಒಬ್ರಿಯಾನ್ ನೇತೃತ್ವದ ಸಂಸದರ ನಿಯೋಗದಲ್ಲಿ ದೋಲಾ ಸೇನ್, ಸಾಗರಿಕಾ ಘೋಷ್, ಸಾಕೇತ್ ಗೋಖಲೆ ಮತ್ತು ಶಂತನು ಸೇನ್ ಇದ್ದಾರೆ. ಸ್ಪರ್ಧೆಗೆ ಎಲ್ಲರಿಗೂ ಸಮಾನ ವೇದಿಕೆ ಕಲ್ಪಿಸಬೇಕು ಎಂದು ಅಗ್ರಹಿಸಿ 24 ಗಂಟೆಗಳ ಧರಣಿಯನ್ನು ಚುನಾವಣಾ ಆಯುಕ್ತರ ಕಚೇರಿಯ ಮುಂದೆ ಕೈಗೊಂಡಿದ್ದಾರೆ.

ಧರಣಿ ಆರಂಭಿಸಿದ ಒಂದು ಗಂಟೆಯಲ್ಲೇ ಪೊಲೀಸರು ಕ್ರಮಕ್ಕೆ ಮುಂದಾದರು. ಚುನಾವಣಾ ಆಯುಕ್ತರನ್ನು ನಿಯೋಗ ಭೇಟಿ ಮಾಡಿದ ತಕ್ಷಣ ಆ ಸ್ಥಳವನ್ನು ತೆರವುಗೊಳಿಸುವಂತೆ ಪೊಲೀಸರು ಮಾಡಿಕೊಂಡ ಮನವಿಯನ್ನು ಪ್ರತಿಭಟನಾನಿರತರು ತಿರಸ್ಕರಿಸಿದರು. 63 ವರ್ಷದ ಒಬ್ರಿಯಾನ್ ಅವರನ್ನು ಪೊಲೀಸರು ಬಸ್ಸಿಗೆ ತಳ್ಳುತ್ತಿರುವ ದೃಶ್ಯ ತುಣುಕುಗಳು ಹರಿದಾಡುತ್ತಿವೆ.

ಬಳಿಕ ಪೊಲೀಸ್ ಠಾಣೆಯಲ್ಲೇ ಪತ್ರಕರ್ತರ ಜತೆ ಮಾತನಾಡಿದ ಒಬ್ರಿಯಾನ್, "ನಮ್ಮ 24 ಗಂಟೆಗಳ ಧರಣಿ ಮುಂದುವರಿಯುತ್ತದೆ. ನಮ್ಮ ಸಹೋದ್ಯೋಗಿ ಮೊಹ್ಮದ್ ನದೀಮುಲ್ ಹಕ್ ಮಧುಮೇಹ ರೋಗಿ. ದೋಲಾ ಸೇನ್ ಅವರ ಕಾಲಿಗೆ ಏಟಾಗಿದ್ದು, ಇದೀಗ ಪರಿಸ್ಥಿತಿ ಹದಗೆಡುತ್ತಿದೆ. ಆದರೆ ಹೋರಾಟಕ್ಕಾಗಿ ನಾವಿಲ್ಲಿದ್ದೇವೆ" ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News