ರಾಯ್ ಬರೇಲಿ | ರಾಹುಲ್ ಗಾಂಧಿ ಕ್ಷೌರ ಮಾಡಿಸಿಕೊಂಡ ಕ್ಷೌರದ ಅಂಗಡಿಯ ಕುರ್ಚಿಗಾಗಿ ನೂಕುನುಗ್ಗಲು!

Update: 2024-05-15 13:35 GMT

PC :X/@shaandelhite

ರಾಯ್ ಬರೇಲಿ: ತನ್ನ ಭದ್ರಕೋಟೆಯಾಗಿದ್ದ ಎರಡು ಲೋಕಸಭಾ ಕ್ಷೇತ್ರಗಳ ಪೈಕಿ ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಪರಾಭವಗೊಂಡ ನಂತರ, ಕಾಂಗ್ರೆಸ್ ಪಾಲಿಗೆ ಉತ್ತರ ಪ್ರದೇಶದಲ್ಲಿ ರಾಯ್ ಬರೇಲಿ ಲೋಕಸಭಾ ಕ್ಷೇತ್ರ ಮಾತ್ರ ಏಕೈಕ ಭದ್ರಕೋಟೆಯಾಗಿ ಉಳಿದುಕೊಂಡಿದೆ. ಇದೀಗ, ರಾಯ್ ಬರೇಲಿಯಲ್ಲಿ ರಾಹುಲ್ ಗಾಂಧಿ ಕ್ಷೌರ ಮಾಡಿಸಿಕೊಂಡಿದ್ದ ಕ್ಷೌರದ ಅಂಗಡಿಯ ಕುರ್ಚಿಯೊಂದು ಬಹುಬೇಡಿಕೆಯ ಕುರ್ಚಿಯಾಗಿ ಬದಲಾಗಿದೆ.

ಈ ಬಾರಿ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದೊಂದಿಗೆ ರಾಯ್ ಬರೇಲಿ ಲೋಕಸಭಾ ಕ್ಷೇತ್ರದಲ್ಲೂ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸೋಮವಾರ ರಾಯ್ ಬರೇಲಿಗೆ ಚುನಾವಣಾ ಪ್ರಚಾರಕ್ಕಾಗಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿನ ಕ್ಷೌರದ ಅಂಗಡಿಯೊಂದಕ್ಕೆ ತೆರಳಿದ್ದರು.

ರಾಯ್ ಬರೇಲಿ ಜಿಲ್ಲೆಯ ಲಾಲ್ ಗಂಜ್ ಪಟ್ಟಣದಲ್ಲಿರುವ ನ್ಯೂ ಮುಂಬಾದೇವಿ ಹೇರ್ ಕಟಿಂಗ್ ಸಲೂನ್ ಗೆ ತೆರಳಿದ್ದ ರಾಹುಲ್ ಗಾಂಧಿ, ಅಲ್ಲಿ ತಮ್ಮ ಕೂದಲಿನ ಕ್ಷೌರ ಮಾಡಿಸಿಕೊಂಡು, ಗಡ್ಡವನ್ನು ಟ್ರಿಮ್ ಮಾಡಿದ್ದರು. ಇದಾದ ನಂತರ, ಅವರು ಅಂಗಡಿಯ ಮಾಲಕ ಮಿಥುನ್ ಕುಮಾರ್ ರೊಂದಿಗೆ ನಡೆಸಿದ ಮಾತುಕತೆಯ ವಿಡಿಯೊ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಯಿತು.

ವೀಡಿಯೊದಲ್ಲಿ ರಾಹುಲ್ ಗಾಂಧಿಯವರು ಕ್ಷೌರಿಕನ ದುಡಿಮೆಯ ಬಗ್ಗೆ ಪ್ರಶ್ನೆ ಕೇಳಿ ಮಾಹಿತಿ ಪಡೆದಿದ್ದಾರೆ. ಈಗ ಟ್ರೆಂಡ್ ಆಗಿರುವ ಕೂದಲಿಗೆ ಬೆಂಕಿ ಹಚ್ಚಿ ಹೇರ್ ಸ್ಟೈಲ್‌ ಮಾಡುವ ಬಗ್ಗೆಯೂ ಕುತೂಹಲದಿಂದ ಕೇಳಿದ್ದಾರೆ. ಕ್ಷೌರಿಕನಿಗೆ ಕಾಂಗ್ರೆಸ್‌ ಗ್ಯಾರೆಂಟಿಗಳ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

ಅಂಗಡಿಯ ಮಾಲಕ ಮಿಥುನ್ ಕುಮಾರ್ ಅವರ ಜೀವನಾನುಭವಗಳ ಕುರಿತೂ ರಾಹುಲ್ ಗಾಂಧಿ ಕೇಳಿ ತಿಳಿದುಕೊಂಡಿದ್ದರು. ದೈನಂದಿನ ಗಳಿಕೆಯ ಕುರಿತು ರಾಹುಲ್ ಗಾಂಧಿ ಪ್ರಶ್ನಿಸಿದಾಗ, ಪ್ರತಿ ದಿನ ನಾನು ಸರಾಸರಿ ರೂ. 400-500 ಸಂಪಾದಿಸುತ್ತೇನೆ ಹಾಗೂ ಪ್ರತಿ ದಿನ ಬೆಳಗ್ಗೆ 7 ಗಂಟೆಯಿಂದ ರಾತ್ರಿ 8.30 ಗಂಟೆಯವರೆಗೆ ದುಡಿಯುತ್ತೇನೆ ಎಂದು ಅಂಗಡಿ ಮಾಲಕ ಉತ್ತರಿಸಿದ್ದರು.

ಕಾಂಗ್ರೆಸ್ ಸಂಸದರಾದ ರಾಹುಲ್ ಗಾಂಧಿ ತಮ್ಮ ಕ್ಷೌರ ಮಾಡಿಸಲು ಕುಳಿತಿದ್ದ ಕುರ್ಚಿಯು ಇದೀಗ ಅನಿರೀಕ್ಷಿತವಾಗಿ ಸ್ಥಳೀಯರ ಪಾಲಿಗೆ ಆಕರ್ಷಣೆಯ ಕೇಂದ್ರ ಬಿಂದುವಾಗಿ ಬದಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಅಂಗಡಿಯ ಸಿಬ್ಬಂದಿಯೊಬ್ಬರು, “ಅಂಗಡಿಗೆ ಬರುತ್ತಿರುವ ಪ್ರತಿಯೊಬ್ಬರೂ ಬೇರಾವುದೇ ಕುರ್ಚಿಯನ್ನು ಒಪ್ಪದೆ, ರಾಹುಲ್ ಗಾಂಧಿ ಆಸೀನರಾಗಿದ್ದ ಕುರ್ಚಿಗಾಗಿಯೇ ಬೇಡಿಕೆ ಇಡುತ್ತಿದ್ದಾರೆ” ಎಂದು ತಿಳಿಸಿದ್ದಾರೆ.

“ರಾಹುಲ್ ಗಾಂಧಿ ಈ ಕುರ್ಚಿಯ ಮೇಲೆ ಆಸೀನರಾದಾಗಿನಿಂದ, ಅವರು ಆಸೀನರಾಗಿದ್ದ ಕುರ್ಚಿಯಲ್ಲಿ ಕುಳಿತು ಕ್ಷೌರ ಮಾಡಿಸಿಕೊಳ್ಳುವ ಅವಕಾಶ ದೊರೆತರೆ, ತಮಗೆ ಒಳ್ಳೆಯ ಅದೃಷ್ಟ ಹಾಗೂ ಜನಪ್ರಿಯತೆಯನ್ನು ತರುತ್ತದೆ ಎಂದು ಜನ ಭಾವಿಸುತ್ತಿದ್ದಾರೆ” ಎಂದು ಅವರು ತಿಳಿಸಿದ್ದಾರೆ.

ಮೇ 20ರಂದು ನಡೆಯಲಿರುವ ಐದನೆ ಹಂತದ ಚುನಾವಣೆಯ ಸಂದರ್ಭದಲ್ಲಿ ರಾಯ್ ಬರೇಲಿ ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News