ಆರು ರಾಜ್ಯಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ ಕಾಂಗ್ರೆಸ್; ಶೀಘ್ರ ಹೆಸರುಗಳ ಘೋಷಣೆ
ಹೊಸದಿಲ್ಲಿ: ʼಗುರವಾರ ಸಂಜೆ ತನ್ನ ಮೊದಲ ಸಭೆ ನಡೆಸಿದ ಕಾಂಗ್ರೆಸ್ ಚುನಾವಣಾ ಸಮಿತಿಯು ಕೇರಳ, ಕರ್ನಾಟಕ, ತೆಲಂಗಾಣ, ಛತ್ತೀಸಗಢ, ದಿಲ್ಲಿ ಮತ್ತು ಲಕ್ಷದ್ವೀಪಗಳಲ್ಲಿ ಹೆಚ್ಚಿನ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿದೆ. ಮಾತುಕತೆಗಳು ಮುಂದುವರಿದಿವೆ, ಔಪಚಾರಿಕ ಘೋಷಣೆ ಶೀಘ್ರ ನಡೆಯಲಿದೆ,” ಎಂದು ಹಿರಿಯ ಕಾಂಗ್ರೆಸ್ ನಾಯಕ ಕೆ ಸಿ ವೇಣುಗೋಪಾಲ್ ಮಾಹಿತಿ ನೀಡಿದ್ದಾರೆ.
ಮೂಲಗಳ ಪ್ರಕಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ಕೇರಳದ ವಯನಾಡ್‌ನಿಂದ ಸ್ಪರ್ಧಿಸಲಿದ್ದಾರೆ. ಛತ್ತೀಸಗಢದ ಮಾಜಿ ಸಿಎಂ ಭೂಪೇಶ್ ಬಘೇಲ್ ಅವರನ್ನು ರಾಜ್ನಂದಗಾವ್‌ನಿಂದ ಕಣಕ್ಕಿಳಿಸಲಾಗುವುದು. ಛತ್ತೀಸಗಢದ ಎಲ್ಲಾ ಪ್ರಮುಖ ಕಾಂಗ್ರೆಸ್ ನಾಯಕರು ಕಣದಲ್ಲಿರಲಿದ್ದಾರೆಂಬ ಮಾಹಿತಿಯಿದೆ.
ಕೇರಳದಲ್ಲಿ 20 ಕ್ಷೇತ್ರಗಳ ಪೈಕಿ 16ರಲ್ಲಿ ಪಕ್ಷ ಸ್ಪರ್ಧಿಸಲಿದೆ. ಮಾಜಿ ಸಚಿವ ಹಾಗೂ ಹಾಲಿ ಸಂಸದ ಶಶಿ ತರೂರ್ ಅವರು ಪಕ್ಷದ ಅಭ್ಯರ್ಥಿಗಳಲ್ಲಿ ಒಬ್ಬರು ಎಂದು ಮೂಲಗಳು ತಿಳಿಸಿವೆ.
ಕರ್ನಾಟಕದಿಂದ ಯಾವುದೇ ರಾಜ್ಯ ಸಚಿವರನ್ನು ಕಣಕ್ಕಿಳಿಸಲಾಗುವುದಿಲ್ಲ ಎಂಬ ಮಾಹಿತಿಯಿದೆ.
ಕರ್ನಾಟಕದಿಂದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸೋದರ ಡಿ.ಕೆ. ಸುರೇಶ್ ಅಭ್ಯರ್ಥಿಗಳಲ್ಲೊಬ್ಬರಾಗಿದ್ದಾರೆಂದು ತಿಳಿದು ಬಂದಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕ್ಷೇತ್ರವಾದ ಕಲಬುರಗಿ ಕ್ಷೇತ್ರದ ಅಭ್ಯರ್ಥಿ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ.
ಸಮಿತಿ ಮತ್ತೆ ಸೋಮವಾರ ಸಭೆ ಸೇರಲಿದೆ.