‘ಭಾರತ್ ಜೋಡೊ ನ್ಯಾಯ ಯಾತ್ರೆ’ಯ ಎರಡನೆ ದಿನದಂದು ಜನರೊಂದಿಗೆ ಸಂವಾದ ನಡೆಸಿದ ರಾಹುಲ್ ಗಾಂಧಿ
ಇಂಫಾಲ: ಸೋಮವಾರ ಸೆಕ್ಮಾಯಿಯಿಂದ ತಮ್ಮ ಭಾರತ್ ಜೋಡೊ ನ್ಯಾಯ ಯಾತ್ರೆಯ ಎರಡನೆ ದಿನವನ್ನು ಆರಂಭಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಮಗೆ ಶುಭ ಕೋರಲು ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನರೊಂದಿಗೆ ಸಂವಾದ ನಡೆಸಿದರು.
ಸುಸಜ್ಜಿತ ವೋಲ್ವೊ ಬಸ್ ನಲ್ಲಿ ತಮ್ಮ ಯಾತ್ರೆಯನ್ನು ಪ್ರಾರಂಭಿಸಿದ ರಾಹುಲ್ ಗಾಂಧಿ, ಬಸ್ ನಿಂದ ಇಳಿದು ಜನರನ್ನು ಭೇಟಿಯಾದ ನಂತರ, ಅವರ ಸಮಸ್ಯೆಗಳನ್ನು ಆಲಿಸಿದರು.
ನಗರದ ಹಲವಾರು ಜನನಿಬಿಡ ಪ್ರದೇಶಗಳಲ್ಲಿ ರಾಹುಲ್ ಗಾಂಧಿಯಿದ್ದ ಬಸ್ ಸಾಗುತ್ತಿದ್ದಂತೆಯೆ, ಮಾರ್ಗಗಳ ಇಕ್ಕೆಲಗಳಲ್ಲಿ ನೆರೆದಿದ್ದ ಜನರು ರಾಹುಲ್ ಗಾಂಧಿಯನ್ನು ಕಂಡು ಹರ್ಷ ವ್ಯಕ್ತಪಡಿಸಿದರು. ಈ ಪೈಕಿ ಬಹುತೇಕರು ಮಹಿಳೆಯರು ಹಾಗೂ ಮಕ್ಕಳಾಗಿದ್ದರು.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, “ಮುಂಜಾನೆ 7.30 ಗಂಟೆಗೆ ಶಿಬಿರದ ಸ್ಥಳದಲ್ಲಿ ಸೇವಾ ದಳವು ಸಾಂಪ್ರದಾಯಿಕ ಧ್ವಜಾರೋಹಣ ನಡೆಸಿದ ನಂತರ ಭಾರತ್ ಜೋಡೊ ನ್ಯಾಯ ಯಾತ್ರೆಯ ಎರಡನೆ ದಿನವು ಉಜ್ವಲವಾಗಿ ಪ್ರಾರಂಭಗೊಂಡಿತು. ಮಣಿಪುರ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಧ‍್ವಜಾರೋಹಣ ನೆರವೇರಿಸಿದರು” ಎಂದು ಹೇಳಿದ್ದಾರೆ.
“ರಾತ್ರಿ ನಾಗಾಲ್ಯಾಂಡ್ ನಲ್ಲಿ ತಂಗುವುದಕ್ಕೂ ಮುನ್ನ, ಯಾತ್ರೆಯು ಮಣಿಪುರದ ಸೆಕ್ಮಾಯಿಯಿಂದ ಕಾಂಗ್ ಪೋಕ್ಪಿಗೆ ತಲುಪಿ, ನಂತರ ಸೇನಾಪತಿಗೆ ತೆರಳಲಿದೆ” ಎಂದು ಅವರು ತಿಳಿಸಿದ್ದಾರೆ.
ಹಿಂಸಾಚಾರ ಪೀಡಿತ ಮಣಿಪುರದಿಂದ ರವಿವಾರ ಭಾರತ್ ಜೋಡೊ ನ್ಯಾಯ ಯಾತ್ರೆ ಪ್ರಾರಂಭಗೊಂಡಿದೆ. ಈ ಸಂದರ್ಭದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಸೌಹಾರ್ದತೆ, ಭ್ರಾತೃತ್ವ, ಸಮಾನತೆ ಮತ್ತು ದ್ವೇಷ, ಹಿಂಸಾಚಾರ ಹಾಗೂ ಏಕಸ್ವಾಮ್ಯರಹಿತ ಆಧರಿತ ಭಾರತದ ಹೊಸ ದೃಷ್ಟಿಕೋನವನ್ನು ಕಾಂಗ್ರೆಸ್ ಪ್ರಸ್ತುತ ಪಡಿಸಲಿದೆ ಎಂದು ಹೇಳಿದ್ದಾರೆ.