ರಾಜಸ್ಥಾನ | ಮಸೀದಿ ಧರ್ಮಗುರುವನ್ನು ಥಳಿಸಿ ಹತ್ಯೆ
ಜೈಪುರ : ಮಸೀದಿಯ ಧರ್ಮಗುರುವೊಬ್ಬರನ್ನು ಮೂವರು ದುಷ್ಕರ್ಮಿಗಳ ಗುಂಪೊಂದು ಥಳಿಸಿ ಹತ್ಯೆಗೈದ ಘಟನೆ ರಾಜಸ್ಥಾನ ಅಜ್ಮೀರ್‌ನಲ್ಲಿ ನಡೆದಿದೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.
ಈ ಘಟನೆ ಕುರಿತಂತೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಗುರುತು ಹಚ್ಚಲು ಹಾಗೂ ಅವರನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ರಾಮಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾಂಚನ್ ನಗರ್‌ನಲ್ಲಿರುವ ಮಸೀದಿಯಲ್ಲಿ ಶನಿವಾರ ಸುಮಾರು ಮುಂಜಾನೆ 2 ಗಂಟೆಗೆ ಈ ಘಟನೆ ನಡೆದಿದೆ. ಆರೋಪಿಗಳು ಮಸೀದಿಗೆ ಪ್ರವೇಶಿಸಿ ಧರ್ಮಗುರು ಮುಹಮ್ಮದ್ ತಾಹಿರ್ (30) ಅವರಿಗೆ ದೊಣ್ಣೆಯಿಂದ ಥಳಿಸಿದ್ದಾರೆ. ತಾಹಿರ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆ ನಡೆಯುವ ಸಂದರ್ಭ ಮಸೀದಿಯ ಒಳಗೆ 6 ಮಕ್ಕಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೂವರು ಆರೋಪಿಗಳು ಘಟನೆಯನ್ನು ಬಹಿರಂಗಪಡಿಸದಂತೆ ಮಕ್ಕಳಿಗೆ ಬೆದರಿಕೆ ಒಡ್ಡಿ, ಅವರ ಮೊಬೈಲ್ ಅನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಆದುದರಿಂದ ಮಕ್ಕಳು ನೆರವಿಗಾಗಿ ಯಾರೊಬ್ಬರಿಗೂ ಕರೆ ಮಾಡಲು ಸಾಧ್ಯವಾಗಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಆರೋಪಿಗಳು ಪರಾರಿಯಾದ ಬಳಿಕ ಮಕ್ಕಳು ಮಸೀದಿಯಿಂದ ಹೊರಗೆ ಬಂದು ಘಟನೆಯ ಕುರಿತು ಜನರಿಗೆ ಮಾಹಿತಿ ನೀಡಿದ್ದಾರೆ. ತಾಹಿರ್ ಅವರು ಮಸೀದಿಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Maulana Mahir, imam at Mohammadi masjid in Ajmer City of Rajasthan beaten to death inside mosque pic.twitter.com/3NDYquDKq5
— Gabbar (@Gabbar0099) April 27, 2024
ತಾಹಿರ್ ಅವರ ಮೃತದೇಹ ಉತ್ತರಪ್ರದೇಶದ ರಾಮ್ಪುರದಲ್ಲಿರುವ ಅವರ ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಎಂದು ರಾಮಗಂಜ್ ಎಸ್‌ಎಚ್‌ಒ ರವೀಂದ್ರ ಸಿಂಗ್ ಹೇಳಿದ್ದಾರೆ.
ಘಟನೆ ಕುರಿತಂತೆ ಅನಾಮಿಕ ದುಷ್ಕರ್ಮಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಹತ್ಯೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿ ಇದುವರೆಗೆ ಯಾರನ್ನೂ ಬಂಧಿಸಿಲ್ಲ. ದುಷ್ಕರ್ಮಿಗಳನ್ನು ಗುರುತು ಪತ್ತೆ ಹಚ್ಚಲು ಹಾಗೂ ಬಂಧಿಸಲು ಪ್ರಯತ್ನ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.