ರೆಪೊ ದರದಲ್ಲಿ ಬದಲಾವಣೆ ಮಾಡದ ಆರ್‌ಬಿಐ; ಸತತ 5ನೇ ಬಾರಿಗೆ 6.50%ದಲ್ಲೇ ಸ್ಥಗಿತ
ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)ನ ಹಣಕಾಸು ನೀತಿ ಸಮಿತಿಯು ಶುಕ್ರವಾರ ರೆಪೊ ದರ (ಆರ್‌ಬಿಐಯು ಬ್ಯಾಂಕ್ ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರ)ವನ್ನು ಸತತ ಐದನೇ ಬಾರಿಗೆ 6.50%ದಲ್ಲೇ ಇರಿಸಲು ನಿರ್ಧರಿಸಿದೆ.
ರೆಪೊ ದರದಲ್ಲಿನ ಬದಲಾವಣೆ ಬಗ್ಗೆ ಹಣಕಾಸು ನೀತಿ ಸಮಿತಿಯು ಪ್ರತಿ ಎರಡು ತಿಂಗಳಿಗೊಮ್ಮೆ ನಿರ್ಧರಿಸುತ್ತದೆ.
2022 ಮೇ ತಿಂಗಳಿನಿಂದ ಸತತ ಆರು ಬಾರಿ ರೆಪೊ ದರವನ್ನು ಏರಿಸಲಾಗಿತ್ತು. ಈ ಅವಧಿಯಲ್ಲಿ ರೆಪೊ ಬಡ್ಡಿ ದರವನ್ನು ಒಟ್ಟು 2.5%ದಷ್ಟು ಹೆಚ್ಚಿಸಲಾಗಿತ್ತು.
ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ಆರು ಸದಸ್ಯರ ಸಮಿತಿಯು ತೆಗೆದುಕೊಂಡ ನಿರ್ಧಾರವು ಸರ್ವಾನುಮತದಿಂದ ಕೂಡಿತ್ತು ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದರು. ಸಮಿತಿಯು ಹಣದುಬ್ಬರದ ಮೇಲೆ ನಿಗಾ ಇಡಲಿದೆ ಹಾಗೂ ಹಣದುಬ್ಬರವನ್ನು ನಿರ್ಧಿಷ್ಟ ಗುರಿಗೆ ತಲುಪಿಸಲು ಬದ್ಧವಾಗಿದೆ ಎಂದು ಅವರು ತಿಳಿಸಿದರು.
ಅಕ್ಟೋಬರ್ ನಲ್ಲಿ ನಡೆದ ಸಮಿತಿಯ ಹಿಂದಿನ ಸಭೆಯ ಬಳಿಕ, ಗ್ರಾಹಕ ಬೆಲೆ ಆಧಾರಿಕ ಹಣದುಬ್ಬರವು 2 ಶೇಕಡದಷ್ಟು ಇಳಿದು 4.9%ದಲ್ಲಿ ನೆಲೆಗೊಂಡಿದೆ ಎಂದು ಶಕ್ತಿಕಾಂತ್ ದಾಸ್ ಹೇಳಿದರು. ಕೆಲವು ತರಕಾರಿಗಳು ಮತ್ತು ಇಂಧನ ಬೆಲೆಗಳಲ್ಲಿ ಆಗಿರುವ ಇಳಿಕೆಯೇ ಇದಕ್ಕೆ ಕಾರಣ ಎಂದು ಅವರು ವಿವರಿಸಿದರು.