ನವೆಂಬರ್ 5ರ ಬಳಿಕವೇ ನೈತಿಕ ಸಮಿತಿ ಮುಂದೆ ಹಾಜರಾಗಲು ಸಿದ್ಧ: ಸಂಸದೆ ಮಹುವಾ ಮೊಯಿತ್ರಾ
ಹೊಸದಿಲ್ಲಿ: ಪೂರ್ವನಿಗದಿತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕಾಗಿರುವುದರಿಂದ ತನ್ನ ವಿರುದ್ಧದ ‘ಹಣಕ್ಕಾಗಿ ಪ್ರಶ್ನೆ’ ಆರೋಪಗಳಿಗೆ ಸಂಬಂಧಿಸಿ ಲೋಕಸಭೆಯ ನೈತಿಕತೆ ಸಮಿತಿಯ ಮುಂದೆ ಅಕ್ಟೋಬರ್ 31ರಂದು ಹಾಜರಾಗಲು ತನಗೆ ಸಾಧ್ಯವಿಲ್ಲವೆಂದು ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ತಿಳಿಸಿದ್ದಾರೆ. ನವೆಂಬರ್ 5ರ ಬಳಿಕವಷ್ಟೇ ತಾನು ಲಭ್ಯವಿರುವುದಾಗಿ ಅವರು ಸಮಿತಿಯ ಅಧ್ಯಕ್ಷ ವಿನೋದ್ ಕುಮಾರ್ ಸೋಂಕರ್ ಅವರಿಗೆ ತಿಳಿಸಿದ್ದಾರೆ.
‘‘2023ರ ನವೆಂಬರ್5ರ ಆನಂತರ ನೀವು ಆಯ್ಕೆ ಮಾಡುವ ಯಾವುದೇ ದಿನಾಂಕದಲ್ಲೂ ಸಮಿತಿಯ ಮುಂದೆ ಹಾಜರಾಗುವುದನ್ನು ಎದುರು ನೋಡುತ್ತಿದ್ದೇನೆ’’ ಎಂದು ಮೊಯಿತ್ರಾ ಅವರು ಸೋಂಕರ್ ಅವರನ್ನು ಉದ್ದೇಶಿಸಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದಾರೆ.
ಸಮಿತಿಯ ಮುಂದೆ ಹಾಜರಾಗಲು ಹಾಗೂ ತನ್ನ ವಿರುದ್ಧದ ಮಾನಹಾನಿಕರ ಆರೋಪಗಳ ವಿರುದ್ಧ ಪ್ರತಿವಾದ ನಡೆಸುವುದನ್ನು ತಾನು ಕಾತುರದಿಂದ ಎದುರು ನೋಡುತ್ತಿದ್ದೇನೆ. ಆದರೆ ಪಶ್ಚಿಮಬಂಗಾಳದಲ್ಲಿ ದುರ್ಗಾ ಪೂಜೆ ಆಚರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ತಾನು ನವೆಂಬರ್ 4ರವರೆಗೆ ವಿವಿಧ ಕಾರ್ಯಕ್ರಮಗಳಲ್ಲಿ ವ್ಯಸ್ತಳಾಗಿರುವುದಾಗಿ ಮೊಯಿತ್ರಾ ತಿಳಿಸಿದ್ದಾರೆ.
ಮೊಯಿತ್ರಾ ಸಂಸತ್‌ನಲ್ಲಿ ಕೆಲವು ನಿರ್ದಿಷ್ಟ ಪ್ರಶ್ನೆಗಳನ್ನು ಕೇಳಲು ಉದ್ಯಮಿ ಹಿರಾನಂದಾನಿ ಅವರಿಂದ ಅಪಾರ ಹಣವನ್ನು ಸ್ವೀಕರಿಸಿದ್ದಾರೆಂಬ ಆರೋಪಗಳನ್ನು ಮಾಡಿರುವ ನ್ಯಾಯವಾದಿ ಜಯ್ ಆನಂತ ದೆಹಾದ್ರಾಯಿ ಹಾಗೂ ಬಿಜೆಪಿ ಸಂಸದ ನಿಶಿಕಾಂತ ದುಬೈ ಅವರ ಹೇಳಿಕೆಗಳನ್ನು ಲೋಕಸಭೆಯ ನೈತಿಕತೆ ಸಮಿತಿಯು ಆಕ್ಟೋಬರ್ 26ರಂದು ದಾಖಲಿಸಿಕೊಂಡಿತ್ತು.