ಚುನಾವಣೆ ಎದುರಿಸಲು ಸಿದ್ಧ: ಕಾಂಗ್ರೆಸ್ ರಣಕಹಳೆ

Update: 2023-09-17 17:19 GMT

ಸಾಂದರ್ಭಿಕ ಚಿತ್ರ \ Photo: PTI


ಹೈದರಾಬಾದ್ : 2024ರ ಲೋಕಸಭಾ ಚುನಾವಣೆಯನ್ನು ಎದುರಿಸಲು ತಾನು ಸರ್ವ ಸನ್ನದ್ಧವಾಗಿರುವುದಾಗಿ ಕಾಂಗ್ರೆಸ್ ಪಕ್ಷವು ರವಿವಾರ ಘೋಷಿಸಿದೆ. ಮುಂಬರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ತನಗೆ ನಿರ್ಣಾಯಕವಾದ ಜನಾದೇಶ ದೊರೆಯಲಿದೆ ಎಂದು ಅದು ಭರವಸೆ ವ್ಯಕ್ತಪಡಿಸಿದೆ.

ವಿಸ್ತೃತ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯು ಹೈದರಾಬಾದ್‌ನಲ್ಲಿ ರವಿವಾರ ಸಮಾರೋಪಗೊಂಡಿದೆ. ಛತ್ತೀಸ್‌ಗಡ, ಮಧ್ಯಪ್ರದೇಶ, ಮಿರೆರಾಂ, ರಾಜಸ್ತಾನ ಹಾಗೂ ತೆಲಂಗಾಣ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪರವಾಗಿ ನಿರ್ಣಾಯಕವಾದ ಜನಾದೇಶ ದೊರೆಯಲಿದೆ ಎಂಬ ಭರವಸೆಯನ್ನು ಸಭೆಯಲ್ಲಿ ವ್ಯಕ್ತಪಡಿಸಲಾಯಿತು.

‘‘ಮುಂಬರುವ ಚುನಾವಣಾ ಸಮರವನ್ನು ಎದುರಿಸಲು ಕಾಂಗ್ರೆಸ್ ಪಕ್ಷವು ಸಂಪೂರ್ಣ ಸಜ್ಜಾಗಿದೆ. ದೇಶದ ಜನತೆ ಬದಲಾವಣೆಯನ್ನು ಬಯಸುತ್ತಿದ್ದಾರೆ. ಕಾನೂನು,ಸುವ್ಯವಸ್ಥೆ, ಸ್ವಾತಂತ್ರ್ಯ, ಸಾಮಾಜಿಕ ಹಾಗೂ ಅರ್ಥಿಕ ನ್ಯಾಯ, ಸಮಾನತೆ ಮತ್ತು ಸಮಭಾವದ ಬಗೆಗಿನ ಅವರ ನಿರೀಕ್ಷೆಗಳನ್ನು ನಾವು ಈಡೇರಿಸಲಿದ್ದೇವೆ’’ ಎಂದು ಹೇಳಿಕೆ ತಿಳಿಸಿದೆ.

ಪುನಾರಚಿತ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಚೊಚ್ಚಲ ಸಭೆಯು ಶನಿವಾರ ಹೈದರಾಬಾದ್‌ನಲ್ಲಿ ಆರಂಭಗೊಂಡಿತ್ತು. ತೆಲಂಗಾಣದ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್‌ಎಸ್ ಸರಕಾರದ ಆಡಳಿತವನ್ನು ಖಂಡಿಸುವ ನಿರ್ಣಯವನ್ನು ಕೂಡಾ ಸಭೆಯಲ್ಲಿ ಅಂಗೀಕರಿಸಲಾಯಿತು. ತೆಲಂಗಾಣ ರಾಜ್ಯ ರಚನೆಯಾಗಿ 9 ವರ್ಷಗಳು ಕಳೆದ ಆನಂತರವೂ ‘ಸುವರ್ಣ ತೆಲಂಗಾಣ’ವನ್ನು ನಿರ್ಮಿಸುವ ಭರವಸೆಗೆ ದಿಲ್ಲಿ ಹಾಗೂ ಹೈದರಾಬಾದ್‌ನ ಎರಡೂ ಸರಕಾರಗಳು ದ್ರೋಹ ಬಗೆದಿವೆ ಎಂದು ಸಿಡಬ್ಲ್ಯುಸಿ ನಿರ್ಣಯ ಖಂಡಿಸಿದೆ.

ಮುಂಬರುವ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಮತ ಚಲಾಯಿಸುವಂತೆ ತೆಲಂಗಾಣದ ಜನತೆಗೆ ಸಿಡಬ್ಲ್ಯುಸಿ ವಿನಮ್ರವಾಗಿ ಮನವಿ ಮಾಡಲಿದೆ ಎಂದು ನಿರ್ಣಯವು ಹೇಳಿದೆ.

ಕಾಂಗ್ರೆಸ್ ಪಕ್ಷದ ನಿಯಮಿತ ಸದಸ್ಯರು, ಖಾಯಂ ಆಹ್ವಾನಿತರು ಹಾಗೂ ವಿಶೇಷ ಆಹ್ವಾನಿತರು, ರಾಜ್ಯ ಘಟಕಗಳ ಅಧ್ಯಕ್ಷರು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು, ಸಂಸದೀಯ ಪಕ್ಷದ ಪದಾಧಿಕಾರಿಗಳು ಮತ್ತು ಕೇಂದ್ರ ಚುನಾವಣಾ ಸಮಿತಿ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

ದೇಶವನ್ನು ವಿಭಜನವಾದಿ ರಾಜಕೀಯದಿಂದ ಮುಕ್ತಗೊಳಿಸುವ ಉದ್ದೇಶದಿಂದ ಇಂಡಿಯಾ ಮೈತ್ರಿಕೂಟಕ್ಕೆ ಸೈದ್ಧಾಂತಿಕ ಹಾಗೂ ಚುನಾವಣಾ ಯಶಸ್ಸನ್ನು ದೊರಕಿಸಿಕೊಡುವ ದೃಢ ಸಂಕಲ್ಪವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.

ಸಿಡಬ್ಲ್ಯುಸಿ ಸಭೆಯಲ್ಲಿ ಸಂಸದ ರಾಹುಲ್ ಮಾತನಾಡಿ ಜನತೆಯ ಸಮಸ್ಯೆಗಳಿಗೆ ಸ್ಪಂದಿಸುವ ಹಾಗೂ ಪಕ್ಷದ ಸೈದ್ಧಾಂತಿಕ ನಿಲುವನ್ನು ಕಾಪಾಡಿಕೊಳ್ಳುವ ಬಗ್ಗೆ ಗಮನಹರಿಸುವಂತೆ ಪಕ್ಷದ ನಾಯಕರಿಗೆ ಮನವಿ ಮಾಡಿದರು.

ಸಿಡಬ್ಲ್ಯುಸಿ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಅವರು ಜನತೆಯ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತುವ ಮೂಕ ಭಾರತಮಾತೆಯ ಧ್ವನಿಯನ್ನು ಆಲಿಸುವಂತೆ ಮನವಿ ಮಾಡಿದರು.

ಶನಿವಾರ ನಡೆದ ಸಭೆಯಲ್ಲಿ ಪಾಲ್ಗೊಂಡ ಕೆಲವು ನಾಯಕರು ಸನಾತನ ಧರ್ಮ ಕುರಿತ ವಿವಾದದ ಬಗ್ಗೆ ಜಾಗರೂಕತೆಯಿಂದ ಪ್ರತಿಕ್ರಿಯಿಸಬೇಕೆಂದು ಸ್ವಪಕ್ಷೀಯರಿಗೆ ಕಿವಿಮಾತು ಹೇಳಿದರು ಮತ್ತು ಬಿಜೆಪಿಯ ಅಜೆಂಡಾದೊಂದಿಗೆ ಸಿಕ್ಕಿಹಾಕಿಕೊಳ್ಳದಂತೆ ಪಕ್ಷವು ಎಚ್ಚರವಹಿಸಬೇಕೆಂದು ಅವರು ಹೇಳಿದರು.

ಸನಾತನ ಧರ್ಮದಂತಹ ವಿವಾದಗಳಿಂದ ಪಕ್ಷವು ದೂರವುಳಿಯಬೇಕೆಂದು ಚತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಾಘೇಲ್, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಸಭೆಯಲ್ಲಿ ತಿಳಿಸಿದರು.

ರಾಹುಲ್ ಅವರ ಭಾರತ ಜೋಡೋ ಯಾತ್ರೆಯಿಂದಾಗಿ ಪಕ್ಷಕ್ಕೆ ಅದರ ಬೇರುಗಳೊಂದಿಗೆ ಸಂಪರ್ಕವನ್ನು ಸಾಧಿಸಲು ಸಾಧ್ಯವಾದುದರ ಜೊತೆಗೆ ದೇಶದ ಮುನ್ನಡೆಗೆ ಇದು ಸೂಕ್ತ ದಾರಿಯಾಗಿದೆ ಎಂಬುದನ್ನು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪಕ್ಷದ ಬಗ್ಗೆ ಸಹಾನುಭೂತಿಹೊಂದಿದವರಿಗೆ ಅರಿತುಕೊಳ್ಳುವಲ್ಲಿ ನೆರವಾಯಿತು ಎಂದವರು ಹೇಳಿದ್ದಾರೆ.

ಭಾರತ ಜೋಡೋ ಯಾತ್ರೆಯಿಂದ ಕರ್ನಾಟಕದಲ್ಲಿ ಪಕ್ಷದ ಗೆಲುವನ್ನು ಖಾತರಿಪಡಿಸಿದೆ ಹಾಗೂ ತೆಲಂಗಾಣದಲ್ಲಿಯೂ ಅದು ಪುನರಾವರ್ತನೆಯಾಗಲಿದೆ ಎಂದು ದಿಗ್ವಿಜಯ್ ಭರವಸೆ ವ್ಯಕ್ತಪಡಿಸಿದರು.

ಸಿಡಬ್ಲ್ಯುಸಿ ನಿರ್ಣಯದ ಮುಖ್ಯಾಂಶಗಳು

1. ಇಂಡಿಯಾ ಮೈತ್ರಿಕೂಟದ ಬಲವರ್ಧನೆಗೆ ಹೃತ್ಪೂರ್ವಕ ಸ್ವಾಗತ. ಈಗಾಗಲೇ ಮೈತ್ರಿಕೂಟವು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯನ್ನು ಧೃತಿಗೆಡಿಸಿದೆ

2. ಮಣಿಪುರದಲ್ಲಿ ಸಾಂವಿಧಾನಿಕ ಯಂತ್ರದ ಸಂಪೂರ್ಣ ಕುಸಿತ ಹಾಗೂ ಹಿಂಸಾಚಾರದ ಮುಂದುವರಿಕೆಗೆ ತೀವ್ರ ಆಕ್ರೋಶ.

3. ಸುಮಾರು ನಾಲ್ಕು ತಿಂಗಳುಗಳಿಗೂ ಅಧಿಕ ಸಮಯದಿಂದ ಮಣಿಪುರವು ಬಿಜೆಪಿಯ ಧ್ರುವೀಕರಣ ಕಾರ್ಯಸೂಚಿಯಿಂದ ವಿಭಜಿತವಾಗಿದೆ.

4. ಮಣಿಪುರ ಹಿಂಸಾಚಾರದ ಬಗ್ಗೆ ಪ್ರಧಾನಿಯವರ ನಿರ್ಲಕ್ಷ್ಯ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವೈಫಲ್ಯ ಹಾಗೂ ಮುಖ್ಯಮಂತ್ರಿ ಎನ್.ಬಿರೇನ್‌ಸಿಂಗ್ ಅವರ ಕಠಿಣ ನಿಲುವು, ಭದ್ರತಾ ಪಡೆಗಳು ಹಾಗೂ ನಾಗರಿಕರ ಮಧ್ಯೆ ಹಾಗೂ ಸೇನೆ/ಅಸ್ಸಾಂ ರೈಫಲ್ಸ್ ಹಾಗೂ ರಾಜ್ಯ ಪೊಲೀಸಂ ಪಡೆಗಳ ನಡುವೆ ಘರ್ಷಣೆಗಳ ಪುನರಾವರ್ತನೆಗೆ ಕಾರಣವಾಗಿದೆ.

5. ಚೀನಾ ಜೊತೆಗಿನ ಗಡಿ ವಿವಾದಲ್ಲಿ ಕೇಂದ್ರ ಸರಕಾರವು ಸ್ಪಷ್ಟ ನಿಲುವನ್ನು ತಾಳಬೇಕು ಹಾಗೂ ದೇಶದ ಪ್ರಾದೇಶಿಕ ಏಕತೆಗೆ ಸವಾಲೊಡ್ಡುವ ಯಾವುದೇ ಸವಾಲಿನ ವಿರುದ್ಧ ಎದ್ದು ನಿಲ್ಲಬೇಕು.

6. ಅದಾನಿ ವಿವಾದಕ್ಕೆ ಸಂಬಂಧಿಸಿ ಬಯಲಾಗಿರುವ ಆಘಾತಕಾರಿ ಅಂಶಗಳ ಬಗ್ಗೆ ಸಂಸತ್‌ನ ಜಂಟಿ ಸಂಸದೀಯ ಸಮಿತಿಯಿಂದ ತನಿಖೆಯಾಗಬೇಕು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News