ಇಸ್ರೇಲ್‌ ಜೊತೆ ಯಾವುದೇ ರೀತಿಯ ಹೊಂದಾಣಿಕೆಯಿಂದ ದೂರ ಉಳಿಯಬೇಕು: ಭಾರತ ಸರ್ಕಾರಕ್ಕೆ ʼಇಂಡಿಯನ್ಸ್‌ ಫಾರ್‌ ಫೆಲೆಸ್ತೀನ್‌ʼ ಆಗ್ರಹ

Update: 2024-02-24 08:01 GMT

Photo: X/@kavita_krishnan

ಇಸ್ರೇಲ್: ಗಾಝಾದಲ್ಲಿ ಫೆಲೆಸ್ತೀನೀಯರ ಮಾನವ ಹಕ್ಕುಗಳ ಉಲ್ಲಂಘನೆಗಳ ವಿರುದ್ಧ ಎದ್ದು ನಿಲ್ಲುವಂತೆ ಅಂತರರಾಷ್ಟೀಯ ನ್ಯಾಯಾಲಯ ಇತ್ತೀಚೆಗೆ ಹೊರಡಿಸಿದ ಆದೇಶವನ್ನು ಸಾರ್ವಜನಿಕವಾಗಿ ಬೆಂಬಲಿಸಬೇಕು ಹಾಗೂ ಇಸ್ರೇಲ್‌ ಜೊತೆ ಯಾವುದೇ ರೀತಿಯ ಹೊಂದಾಣಿಕೆಯಿಂದ ದೂರ ಉಳಿಯಬೇಕು ಎಂದು ಇಂಡಿಯನ್ಸ್‌ ಫಾರ್‌ ಫೆಲೆಸ್ತೀನ್‌ ಸಂಸ್ಥೆಯು ಭಾರತದ ನರೇಂದ್ರ ಮೋದಿ ಸರ್ಕಾರವನ್ನು ಆಗ್ರಹಿಸಿದೆ.

ಫೆಲೆಸ್ತೀನ್‌ನಲ್ಲಿ ತಕ್ಷಣ ಕದನವಿರಾಮ ಘೋಷಿಸಬೇಕು ಎಂದು ಆಗ್ರಹಿಸಿದ ಸಂಘಟನೆ, ಈ ವಿಚಾರದಲ್ಲಿ ಭಾರತ ಸರ್ಕಾರದ ಅಲಕ್ಷ್ಯವನ್ನು ಮತ್ತು ಗಾಝಾ ಮತ್ತು ಫೆಲೆಸ್ತೀನೀಯರ ಮೇಲೆ ಇಸ್ರೇಲ್‌ನ ಅಮಾನವೀಯ ದೌರ್ಜನ್ಯವನ್ನು ಖಂಡಿಸಲು ಭಾರತದ ನಿರಾಕರಣೆಯಿಂದ ಆಘಾತವಾಗಿದೆ ಎಂದು ಹೇಳಿದೆ.

“ಇಸ್ರೇಲ್‌ ಜೊತೆಗಿನ ಸಂಬಂಧಗಳನ್ನು ಜಗತ್ತಿನ ಅನೇಕ ದೇಶಗಳು ಮರುವಿಮರ್ಶಿಸುತ್ತಿದ್ದರೆ ಭಾರತ ಮಾತ್ರ ಇಸ್ರೇಲ್‌ ಜೊತೆಗೆ, ಪ್ರಮುಖವಾಗಿ ರಕ್ಷಣೆ ಮತ್ತು ಸರ್ವೇಕ್ಷಣೆ ವಲಯಗಳಲ್ಲಿ ತನ್ನ ನಿಕಟ ಸಹಯೋಗವನ್ನು ಮುಂದುವರಿಸಿದೆ. ಇದು ಕಳವಳಕಾರಿ,” ಎಂದು ಇಂಡಿಯನ್ಸ್‌ ಫಾರ್‌ ಫೆಲೆಸ್ತೀನ್‌ ಹೇಳಿದೆ.

“ಗಾಝಾ ಮೇಲಿನ ಇಸ್ರೇಲ್‌ನ ನಿರಂತರ ದಾಳಿಯ ನಡುವೆ ಅದಾನಿ-ಎಲ್ಬಿಟ್‌ ಅಡ್ವಾನ್ಸ್ಡ್‌ ಸಿಸ್ಟಮ್ಸ್‌ ಇಂಡಿಯಾ ಲಿಮಿಟೆಡ್‌ ನಿರ್ಮಿತ ಇಪ್ಪತ್ತು ಹರ್ಮಿಸ್-900 ಮಿಲಿಟರಿ ಡ್ರೋನ್‌ಗಳನ್ನು ಸಂಭಾವ್ಯವಾಗಿ ಗಾಝಾದಲ್ಲಿ ಬಳಸಲು ಇಸ್ರೇಲ್‌ಗೆ ಕಳುಹಿಸಲಾಗಿದೆ. ಹಲವು ಇತರ ಭಾರತೀಯ ಕಂಪೆನಿಗಳೂ ಇಸ್ರೇಲಿ ಶಸ್ತ್ರಾಸ್ತ್ರ ತಯಾರಕರ ಜೊತೆ ಜಂಟಿ ಘಟಕಗಳನ್ನು ಹೊಂದಿವೆ,” ಎಂದು ಹೇಳಿಕೆಯಲ್ಲಿ ಇಂಡಿಯನ್ಸ್‌ ಫಾರ್‌ ಫೆಲೆಸ್ತೀನ್‌ ಹೇಳಿದೆ.

ಗಾಝಾ ಕುರಿತಂತೆ ಅಂತರರಾಷ್ಟ್ರೀಯ ನ್ಯಾಯಾಲಯದ ತೀರ್ಪನ್ನು ಅನುಸರಿಸಲು ಭಾರತ ಸರ್ಕಾರದ ಮೇಲೆ ಒತ್ತಡ ಹೇರಲು ಸಂಘಟನೆ ಶುಕ್ರವಾರ ರಾಜಧಾನಿಯ ಕಾನ್‌ಸ್ಟಿಟ್ಯೂಶನ್‌ ಕ್ಲಬ್‌ನಲ್ಲಿ ಸಭೆ ನಡೆಸಿದೆ. ರಾಜಕೀಯ ಪಕ್ಷಗಳು, ಮಾದ್ಯಮಗಳು, ರಾಜತಾಂತ್ರಿಕ ಸಮುದಾಯ, ಕಾನೂನು, ವಿದೇಶಾಂಗ ನೀತಿ ತಜ್ಞರು ಸೇರಿದಂತೆ ನೂರಾರು ಮಂದಿ ಈ ಸಭೆಯಲ್ಲಿ ಭಾಗವಹಿಸಿದ್ದರು.

“ಫೆಲೆಸ್ತೀನಿ ಕೆಲಸಗಾರರ ಸ್ಥಾನದಲ್ಲಿ ಭಾರತೀಯ ಕೆಲಸಗಾರರನ್ನು ನೇಮಿಸುವ ಇಸ್ರೇಲ್‌ನ ಯತ್ನಕ್ಕೆ ಭಾರತ ಸರ್ಕಾರ ಸಹಾಯ ಮಾಡುತ್ತಿದೆ. ಇದು ಆಕ್ಷೇಪಾರ್ಹ, ಇಸ್ರೇಲ್‌ಗೆ ತೆರಳುವ ಭಾರತೀಯ ಕೆಲಸಗಾರರು ಎದುರಿಸಬಹುದಾದ ಸಂಭಾವ್ಯ ಅಪಾಯಗಳನ್ನು ನಿರ್ಲಕ್ಷಿಸಿದೆ, ಅಷ್ಟೇ ಅಲ್ಲದೆ ಗಾಝಾದಲ್ಲಿ ನಡೆಯುತ್ತಿರುವ ನರಮೇಧವನ್ನು ಪ್ರತಿಭಟಿಸುವ ಎಲ್ಲಾ ಯತ್ನಗಳನ್ನು ದಮನಿಸುವ ಮೂಲಕ ಇಸ್ರೇಲ್‌ಗೆ ಬೇಕಿದ್ದಂತೆ ನಡೆದುಕೊಳ್ಳುತ್ತಿದೆ,” ಎಂದು ಹೇಳಿಕೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News