ಪತ್ರಿಕೆ, ನಿಯತಕಾಲಿಕ ನೋಂದಣಿ ಪ್ರಕ್ರಿಯೆ ಇನ್ನು ಸರಳ

Update: 2023-12-22 05:22 GMT

Photo: freepik

ಹೊಸದಿಲ್ಲಿ: ಪ್ರಕಾಶನ ಉದ್ಯಮವನ್ನು ನಿಯಂತ್ರಿಸುವ ಬ್ರಿಟಿಷ್ ಯುಗದ ಕಾನೂನನ್ನು ಬದಲಿಸಿ, ವೃತ್ತ ಪತ್ರಿಕೆಗಳು ಹಾಗೂ ನಿಯತಕಾಲಿಕಗಳ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸುವ ಮಸೂದೆಗೆ ಸಂಸತ್ತು ಗುರುವಾರ ಒಪ್ಪಿಗೆ ನೀಡಿದೆ.

ಪತ್ರಿಕೆ ಮತ್ತು ನಿಯತಕಾಲಿಕಗಳ ನೋಂದಣಿ ಮಸೂದೆ-2023ನ್ನು ಲೋಕಸಭೆ ಧ್ವನಿ ಮತದಿಂದ ಆಂಗೀಕರಿಸಿದ್ದು, ಹಾಲಿ ಇರುವ ಎಂಟು ಹಂತದ ಪ್ರಕ್ರಿಯೆಯನ್ನು ರದ್ದುಪಡಿಸಿ, ಏಕ ಹಂತದ ನೋಂದಣಿ ಪ್ರಕ್ರಿಯೆಯನ್ನು ಜಾರಿಗೆ ತರಲು ನೂತನ ಮಸೂದೆ ಅನುವು ಮಾಡಿಕೊಡಲಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

ಸದ್ಯಕ್ಕೆ ಜಾರಿಯಲ್ಲಿರುವ ಪತ್ರಿಕೆ ಮತ್ತು ಪುಸ್ತಕಗಳ ನೋಂದಣಿ (ಪಿಆರ್ಬಿ) ಕಾಯ್ದೆ-1867ರ ಬದಲಿಗೆ ಹೊಸ ಕಾಯ್ದೆ ಜಾರಿಗೆ ಬರಲಿದೆ. ಕಳೆದ ಮುಂಗಾರು ಅಧಿವೇಶನದಲ್ಲಿ ಆಗಸ್ಟ್ 3ರಂದು ರಾಜ್ಯಸಭೆ ಈ ಮಸೂದೆಯನ್ನು ಆಂಗೀಕರಿಸಿತ್ತು.

ವೃತ್ತಪತ್ರಿಕೆ ಮತ್ತು ನಿಯತಕಾಲಿಕಗಳ ನೋಂದಣಿಗೆ ಸರಳ, ಸ್ಮಾರ್ಟ್ ಮತ್ತು ಏಕಕಾಲದ ಪ್ರಕ್ರಿಯೆಯನ್ನು ಈ ಮಸೂದೆ ಜಾರಿಗೆ ತರಲಿದೆ. ಇದಕ್ಕೂ ಮುನ್ನ ಪತ್ರಿಕೆ ಅಥವಾ ನಿಯತಕಾಲಿಕಗಳು ಎಂಟು ಹಂತದ ನೋಂದಣಿ ಪ್ರಕ್ರಿಯೆಗೆ ಒಳಗಾಗಬೇಕಿತ್ತು. ಇದೀಗ ಒಂದು ಬಟನ್ ಕ್ಲಿಕ್ ಮಾಡುವ ಮೂಲಕ ಇದನ್ನು ಮಾಡಬಹುದಾಗಿದೆ" ಎಂದು ವಿವರಿಸಿದರು.

ಈ ಮಸೂದೆಯು ನೈಜ ಭಾರತೀಯತೆಯನ್ನು ಉತ್ತೇಜಿಸುತ್ತದೆ ಹಾಗೂ  ಮಾಧ್ಯಮ ಕ್ಷೇತ್ರದಲ್ಲಿ ಉದ್ಯಮಶೀಲತೆಗೆ ಸ್ಫೂರ್ತಿಯಾಗುತ್ತದೆ ಎಂದು ಸಚಿವ ಅನುರಾಗ್ ಠಾಕೂರ್ ಅಭಿಪ್ರಾಯಪಟ್ಟರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News