ಆರೋಗ್ಯ ಪೇಯ ವಿಭಾಗದಿಂದ ʼಬೋರ್ನ್‌ವಿಟಾʼ ತೆಗೆದುಹಾಕಲು ಕೇಂದ್ರದ ಸೂಚನೆ
Remove Bournvita From 'Health Drinks' Category
ಹೊಸದಿಲ್ಲಿ: ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯವು ಮಹತ್ವದ ಸೂಚನೆಯೊಂದನ್ನು ಇ-ಕಾಮರ್ಸ್ ಕಂಪೆನಿಗಳಿಗೆ ನೀಡಿದ್ದು ಬೋರ್ನ್‌ವಿಟಾ ಸಹಿತ ಎಲ್ಲಾ ಪೇಯ ಮತ್ತು ಪಾನೀಯಗಳನ್ನು ತಮ್ಮ ಪೋರ್ಟಲ್‌ಗಳಲ್ಲಿ “ಆರೋಗ್ಯ ಪಾನೀಯಗಳ” ವಿಭಾಗದಿಂದ ತೆಗದುಹಾಕುವಂತೆ ಆದೇಶಿಸಿದೆ.
“ಎಫ್‌ಎಸ್‌ಎಸ್‌ಎಐ ಮತ್ತು ಮೋಂಡೆಲೆಝ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಎಫ್‌ಎಸ್‌ಎಸ್ ಆಕ್ಟ್ 2006 ನಿಯಮಗಳು ಮತ್ತು ನಿಬಂಧನೆಗಳನ್ವಯ ವ್ಯಾಖ್ಯಾನಿಸಲಾದ ಯಾವುದೇ ಆರೋಗ್ಯ ಪೇಯ ಇಲ್ಲ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಕ್ರಿಮಿನಲ್ ದಂಡ ಸಂಹಿತೆ ಕಾಯಿದೆ 2005 ಇದರ ಸೆಕ್ಷನ್ 14 ಅಡಿ ತನಿಖೆ ನಡೆಸಿ ಹೇಳಿದೆ ಎಂದು ಎಪ್ರಿಲ್ 10ರಂದು ಹೊರಡಿಸಲಾದ ಅಧಿಸೂಚನೆಯಲ್ಲಿ ಸಚಿವಾಲಯ ತಿಳಿಸಿದೆ.
ಬೋರ್ನ್‌ವಿಟಾದಲ್ಲಿ ಸ್ವೀಕಾರಾರ್ಹ ಮಿತಿಗಳಿಗಿಂತ ಹೆಚ್ಚು ಸಕ್ಕರೆಯ ಅಂಶವಿದೆ ಎಂದು ಆಯೋಗದ ತನಿಖೆಯಿಂದ ಕಂಡುಕೊಂಡ ನಂತರ ಈ ಕ್ರಮಕೈಗೊಳ್ಳಲಾಗಿದೆ.
ದೇಶದ ಆಹಾರ ಕಾನೂನುಗಳಲ್ಲಿ ಆರೋಗ್ಯ ಪೇಯ ಎಂಬ ವ್ಯಾಖ್ಯಾನ ಇಲ್ಲದೇ ಇರುವುದರಿಂದ ಆ ವಿಭಾಗದಡಿ ಯಾವುದೇ ಉತ್ಪನ್ನ ಬರುವಂತಿಲ್ಲ ಎಂದು ಎಫ್‌ಎಸ್‌ಎಸ್‌ಎಐ ಹೇಳಿದೆ.
ಇತ್ತೀಚೆಗೆ ಯುಟ್ಯೂಬರ್ ಒಬ್ಬರು ಬೋರ್ನ್‌ವಿಟಾ ಉಲ್ಲೇಖಿಸಿ ಅದರಲ್ಲಿ ಸಕ್ಕರೆ, ಕೊಕ್ಕೋ ಸಾಲಿಡ್ ಅಧಿಕವಾಗಿದೆ ಮತ್ತು ಹಾನಿಕಾರಕ ಬಣ್ಣಗಳಿವೆ ಹಾಗೂ ಮಕ್ಕಳ ಆರೋಗ್ಯಕ್ಕೆ ಹಾನಿಕರ ಮತ್ತು ಕ್ಯಾನ್ಸರ್ ಮುಂತಾದ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಹೇಳಿದ್ದು ಭಾರೀ ಸುದ್ದಿಯಾಗಿತ್ತು.