ಅಯೋಧ್ಯೆ ರಾಮ ಮಂದಿರಕ್ಕೆ ದೇಣಿಗೆ ನೀಡಲು ಆರ್‌ಪಿಎಫ್ ಕಾನ್ಸ್ಟೇಬಲ್ ಬಯಕೆ
ಹೊಸದಿಲ್ಲಿ: ಕಳೆದ ಜುಲೈನಲ್ಲಿ ದ್ವೇಷಾಪರಾಧದಲ್ಲಿ ಜೈಪುರ ಎಕ್ಸ್‌ಪ್ರೆಸ್ ರೈಲಿನಲ್ಲಿ ಮೂವರು ಮುಸ್ಲಿಮರು ಸೇರಿದಂತೆ ನಾಲ್ವರನ್ನು ಗುಂಡಿಕ್ಕಿ ಕೊಂದಿದ್ದ ರೈಲ್ವೆ ರಕ್ಷಣಾ ಪಡೆ (RPF)ಯ ಕಾನ್ಸ್ಟೇಬಲ್ ಚೇತನ ಸಿಂಗ್ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಆರ್ಥಿಕ ದೇಣಿಗೆ ನೀಡಲು ಬಯಸಿದ್ದಾನೆ.
ಪ್ರಸ್ತುತ ಜೈಲಿನಲ್ಲಿರುವ ಸಿಂಗ್ ತನ್ನ ಬ್ಯಾಂಕ್ ಖಾತೆಯನ್ನು ಸ್ತಂಭನ ಮುಕ್ತಗೊಳಿಸುವಂತೆ ವಕೀಲರ ಮೂಲಕ ನ್ಯಾಯಾಲಯವನ್ನು ಕೋರಿಕೊಳ್ಳಲು ಮುಂದಾಗಿದ್ದಾನೆ ಎಂದು ಬಲ್ಲ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮ ವರದಿಗಳು ತಿಳಿಸಿವೆ.
ಈ ಹಿಂದೆ ಆರ್ಪಿಎಫ್ಗೆ ಪತ್ರವನ್ನು ಬರೆದಿದ್ದ ಸಿಂಗ್,ತನ್ನ ಕುಟುಂಬವನ್ನು ಪೋಷಿಸಲು ನ್ಯಾಯಾಲಯದಲ್ಲಿ ತನ್ನ ವಿಚಾರಣೆ ಸಮಯದಲ್ಲಿಯೂ ತನ್ನ ವೇತನ ಪಾವತಿಯನ್ನು ಮುಂದುವರಿಸುವಂತೆ ವಿನಂತಿಸಿಕೊಂಡಿದ್ದ.
ತಾನು ಯಾವುದೇ ಕೊಲೆಯನ್ನು ಮಾಡಿಲ್ಲ ಮತ್ತು ಕಳೆದ ಕೆಲವು ವರ್ಷಗಳಿಂದ ಕೋಪವನ್ನು ನಿಯಂತ್ರಿಸಲು ತನಗೆ ಸಾಧ್ಯವಾಗುತ್ತಿಲ್ಲ ಎಂದು ಸಿಂಗ್ ಈಗಲೂ ನಂಬಿದ್ದಾನೆ ಎಂದು ತಿಳಿಸಿರುವ ಮೂಲಗಳು,ತಾನು ಇನ್ನೊಂದು ಆತ್ಮದ ವಶದಲ್ಲಿದ್ದೇನೆ ಎಂದು ತನಗೆ ಭಾಸವಾಗುತ್ತಿದೆ ಎಂದು ಆತ ಇತರರಿಗೆ ಹೇಳುತ್ತಿರುತ್ತಾನೆ ಎಂದಿವೆ.
ಜು.31ರಂದು ಸಿಂಗ್ ಮಹಾರಾಷ್ಟ್ರದ ಪಾಲ್ಘರ್ ರೈಲು ನಿಲ್ದಾಣದ ಸಮೀಪ ಚಲಿಸುತ್ತಿದ್ದ ರೈಲಿನಲ್ಲಿ ನಾಲ್ವರನ್ನು ಗುಂಡಿಕ್ಕಿ ಕೊಂದಿದ್ದ. ಮೃತರಲ್ಲಿ ಓರ್ವ ಎಎಸ್ಐ ಮತ್ತು ಗಡ್ಡವನ್ನು ಬಿಟ್ಟಿದ್ದ ಮೂವರು ಮುಸ್ಲಿಮ್ ವ್ಯಕ್ತಿಗಳು ಸೇರಿದ್ದರು. ಸಿಂಗ್ ಒಂಭತ್ತು ಬೋಗಿಗಳಲ್ಲಿ ಹುಡುಕಾಟ ನಡೆಸಿ ಈ ಮುಸ್ಲಿಮರನ್ನು ಹತ್ಯೆಗೈದಿದ್ದ. ಅಬ್ದುಲ್ ಕಾದರ್ ಮುಹಮ್ಮದ್ ಹುಸೇನ್ ಭಾನಪುರವಾಲಾ,ಸೈಯದ್ ಸೈಫುದ್ದೀನ್ ಮತ್ತು ಅಸ್ಗರ್ ಅಬ್ಬಾಸ್ ಶೇಖ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು.