ಎರಡು ತಿಂಗಳಿಂದ ಮುಚ್ಚಿದ್ದ ಮಣಿಪುರ ಆ್ಯಕ್ಸಿಸ್ ಬ್ಯಾಂಕ್ ನಿಂದ ಒಂದು ಕೋಟಿ ರೂಪಾಯಿ ಕಳವು!
ಎರಡು ತಿಂಗಳಿಂದ ಮುಚ್ಚಿದ್ದ ಮಣಿಪುರ ಆ್ಯಕ್ಸಿಸ್ ಬ್ಯಾಂಕ್ ನಿಂದ ಒಂದು ಕೋಟಿ ರೂಪಾಯಿ ಕಳವು!
ಇಂಫಾಲ: ಜನಾಂಗೀಯ ಸಂಘರ್ಷದ ಕಾರಣದಿಂದಾಗಿ ಮೇ 4ರಿಂದ ಮುಚ್ಚಿದ್ದ ಚುರಚಂದಾಪುರ ಜಿಲ್ಲೆಯ ಆ್ಯಕ್ಸಿಸ್ ಬ್ಯಾಂಕ್ ಶಾಖೆಯನ್ನು ಸೋಮವಾರ ಮತ್ತೆ ತೆರೆಯಲಾಗಿದ್ದು, ಬ್ಯಾಂಕ್ ಶಾಖೆ ಮುಚ್ಚಿದ್ದ ಅವಧಿಯಲ್ಲಿ ಸುಮಾರು ಒಂದು ಕೋಟಿ ರೂಪಾಯಿ ದರೋಡೆಯಾಗಿರುವುದು ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಆ್ಯಕ್ಸಿಸ್ ಬ್ಯಾಂಕಿನ ಚುರಚಂದಾಪುರ ಶಾಖೆಯಲ್ಲಿ ದರೋಡೆ ನಡೆದಿರುವ ಬಗ್ಗೆ ಕೆಲ ಮಾಧ್ಯಮಗಳಲ್ಲಿ ವರದಿಯಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಇದು ದರೋಡೆ ಅಲ್ಲ. ಕಳ್ಳತನದ ಪ್ರಕರಣ ಎನ್ನುವುದು ಪ್ರಾಥಮಿಕ ವರದಿಗಳಿಂದ ತಿಳಿದು ಬಂದಿದೆ.
ಮೇ 3ರಂದು ಜನಾಂಗೀಯ ಕಲಹ ಆರಂಭವಾದ ಬಳಿಕ ಮೇ 4ರಂದು ಬ್ಯಾಂಕ್ ಶಾಖೆಯನ್ನು ಮುಚ್ಚಲಾಗಿತ್ತು. ಸೋಮವಾರವಷ್ಟೇ ಶಾಖೆ ತೆರೆಯಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕಳ್ಳರು ಬ್ಯಾಂಕಿನ ವೆಂಟಿಲೇಟರ್ ಮುರಿದು ಶೌಚಾಲಯದ ಮೂಲಕ ಭದ್ರತಾಕೊಠಡಿಗೆ ರಂಧ್ರ ಕೊರೆದು ನುಗ್ಗಿರಬೇಕು ಎಂದು ಅಂದಾಜಿಸಲಾಗಿದೆ. ಭದ್ರತಾ ಕೊಠಡಿಯ ಕೀಲಿಗಳನ್ನು ವ್ಯವಸ್ಥಾಪಕರು ತಂದ ಬಳಿಕ ಸೂಕ್ತ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಪೊಲೀಸರು ಹಾಗೂ ಕೇಂದ್ರೀಯ ಪಡೆಗಳು ಕಣಿವೆ ಹಾಗೂ ಬೆಟ್ಟ ಪ್ರದೇಶಗಳ ಸೂಕ್ಷ್ಮ ಜಾಗಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದು, ಉಗ್ರರು ಹಾಗೂ ಕಿಡಿಗೇಡಿಗಳು ಅಕ್ರಮವಾಗಿ ನಿರ್ಮಿಸಿದ್ದ 10 ಬಂಕರ್ಗಳನ್ನು ಪತ್ತೆ ಮಾಡಿ ನಾಶಪಡಿಸಿದ್ದಾಗಿ ಪೊಲೀಸ್ ಮೂಲಗಳು ತಿಳಿಸಿವೆ.