ಭಾರತದಲ್ಲಿ ಉಪ್ಪು ತಿನ್ನುವವರೇ ಹೆಚ್ಚು : ಐಸಿಎಂಆರ್ ವರದಿ
ಹೊಸದಿಲ್ಲಿ: ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿ ದಿನ ಓರ್ವ ವ್ಯಕ್ತಿ ಸೇವಿಸಬೇಕಾದ ಉಪ್ಪಿನ ಪ್ರಮಾಣವನ್ನು 5 ಗ್ರಾಂ.ಗೆ ನಿಗದಿಪಡಿಸಿದ್ದರೂ, ಭಾರತದಲ್ಲಿ ದಿನಂಪ್ರತಿ ಉಪ್ಪು ಸೇವೆಯ ಪ್ರಮಾಣವು (ಪುರುಷರು 8.9 ಹಾಗೂ ಮಹಿಳೆಯರು 7.1 ಗ್ರಾಂ.) ಆಗಿರುವುದಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್)ಯ ವರದಿಯೊಂದು ಬಹಿರಂಗಪಡಿಸಿದೆ.
ಭಾರತದ ಗ್ರಾಮಾಂತರ ಪ್ರದೇಶಗಳಲ್ಲಿ ಪುರುಷರಲ್ಲಿ ಉಪ್ಪಿನ ಸೇವನೆಯ ಪ್ರಮಾಣವು ಗಣನೀಯವಾಗಿ ಅತ್ಯಧಿಕವಾಗಿದೆ. ಅತಿಯಾದ ದೇಹತೂಕವಿರುವವರು ಹಾಗೂ ಬೊಜ್ಜುದೇಹದ ಪುರುಷರಲ್ಲಿಯೂ ಉಪ್ಪಿನ ಸೇವನೆಯ ಪ್ರಮಾಣವು ಹೆಚ್ಚಿದೆ. ರಾಷ್ಟ್ರೀಯ ಎನ್ ಸಿ ಡಿ ಕಣ್ಗಾವಲು ಸಮೀಕ್ಷೆಯ (ಎನ್ಎನ್ಎಂಎಸ್) ಭಾಗವಾಗಿ ನಡೆಸಿದ ಮಾದರಿ ಸಮೀಕ್ಷೆಯನ್ನು ಆಧರಿಸಿ ಈ ವರದಿಯನ್ನು ತಯಾರಿಸಲಾಗಿದೆ.
ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಹೆಚ್ಚಿನವರಿಗೆ ಅಧಿಕ ಪ್ರಮಾಣದ ಉಪ್ಪಿನ ಸೇವನೆ ಅಥವಾ ಕಡಿಮೆ ಪ್ರಮಾಣದ ಉಪ್ಪಿನ ಸೇವನೆಯಿಂದ ಆಗುವ ಹಾನಿಕಾರಕ ಪರಿಣಾಮಗಳ ಬಗ್ಗೆ ಅರಿವಿಲ್ಲವೆಂದು ಮೂಲಗಳು ತಿಳಿಸಿವೆ. ‘‘ ಭಾರತೀಯರಲ್ಲಿ ಉಪ್ಪಿನ ಸೇವನೆಯ ಪ್ರಮಾಣ ಅಧಿಕವಾಗಿದೆ. ಮನೆಯಿಂದ ಹೊರಗೆ ತಯಾರಿಸುವ ಹಾಗೂ ಸಂಸ್ಕರಿತ ಆಹಾರಗಳನ್ನು ಕಡಿತಗೊಳಿಸುವ ಅಗತ್ಯವಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ 10,659 ಮಂದಿ ಪಾಲ್ಗೊಂಡಿದ್ದು, 18ರಿಂದ 69 ವರ್ಷ ವಯಸ್ಸಿನವರಾಗಿದ್ದಾರೆ’’ ಅಧ್ಯಯನ ತಂಡದ ನೇತೃತ್ವ ವಹಿಸಿದ ಪ್ರಶಾಂತ್ ಮಾಥುರ್ ತಿಳಿಸಿದ್ದಾರೆ.
ಉದ್ಯೋಗಸ್ಥರು ಹಾಗೂ ತಂಬಾಕು ಬಳಕೆದಾರರಲ್ಲಿ ಉಪ್ಪಿನ ಸೇವನೆ ಪ್ರಮಾಣ (8.3 ಗ್ರಾಂ) ಹೆಚ್ಚಿರುವುದು ಅಧ್ಯಯನದಿಂದ ಕಂಡುಬಂದಿದೆ. ಅಧಿಕ ರಕ್ತದೊತ್ತಡವಿರುವವರಲ್ಲಿ ಉಪ್ಪಿನ ಸೇವನೆ ಪ್ರಮಾಣವು (8.5) ಹೆಚ್ಚಿದೆ. 2025ರೊಳಗೆ ಉಪ್ಪಿನ ಸೇವನೆಯ ಪ್ರಮಾಣದಲ್ಲಿ 30 ಶೇಕಡದಷ್ಟು ಇಳಿಕೆ ಮಾಡುವ ಯೋಜನೆಯನ್ನು ಹಮ್ಮಿಕೊಳ್ಳುವಂತೆಯೂ ವರದಿ ಶಿಫಾರಸು ಮಾಡಿದೆ. ಕಡಿಮೆ ಪ್ರಮಾಣದ ಉಪ್ಪಿನ ಸೇವನೆಯಿಂದ ಅಧಿಕ ರಕ್ತದೊತ್ತಡವನ್ನು ಶೇ.25ರಷ್ಟು ಕಡಿಮೆ ಮಾಡಬಹುದಾಗಿದೆ ಎಂದು ವರದಿ ಹೇಳಿದೆ.
ಭಾರತದಲ್ಲಿ ಸಂಭವಿಸುವ ಒಟ್ಟು ಸಾವುಗಳಲ್ಲಿ ಅಂದಾಜು 28.1 ಶೇಕಡದಷ್ಟು ಹೃದಯನಾಳಕ್ಕೆ ಸಂಬಂಧಿಸಿದ ಕಾಯಿಲೆಗಳಿಂದಾಗುತ್ತವೆ., 2016ರಲ್ಲಿ 10.63 ಲಕ್ಷ ಮಂದಿ ಅಧಿಕರಕ್ತದೊತ್ತಡದಿಂದ ಸಾವನ್ನಪ್ಪಿದ್ದು, 1990ರಲ್ಲಿ ಇದೇ ಕಾಯಿಲೆಗೆ ಬಲಿಯಾದವರ ಸಂಖ್ಯೆ 78 ಸಾವಿರದಷ್ಟಿತ್ತು ಎಂದು ವರದಿ ತಿಳಿಸಿದೆ.